ಇತಿಶ್ರೀ ಬೆಂಗಳೂರು!

ಇನ್ನು `ಬೆಂಗಳೂರು' ಇರುವುದಿಲ್ಲ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬುದನ್ನು ತೆಗೆದುಹಾಕಿ ಮೂರು `ನಗರ ಪಾಲಿಕೆ' ಮಾಡಲು ವಿಧೇಯಕ ಮಂಡಿಸಿರುವ...
ಬೆಂಗಳೂರು ನಗರ
ಬೆಂಗಳೂರು ನಗರ

ವಿಧಾನಸಭೆ: ಇನ್ನು `ಬೆಂಗಳೂರು' ಇರುವುದಿಲ್ಲ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬುದನ್ನು ತೆಗೆದುಹಾಕಿ ಮೂರು `ನಗರ ಪಾಲಿಕೆ' ಮಾಡಲು ವಿಧೇಯಕ ಮಂಡಿಸಿರುವ ರಾಜ್ಯ ಸರ್ಕಾರ, ಈ ಮೂರು ನಗರ ಪಾಲಿಕೆಗಳಲ್ಲಿ `ಬೆಂಗಳೂರು' ಎಂಬ ಪದ ತೆಗೆದುಹಾಕಲು ಸ್ಪಷ್ಟವಾಗಿ ನಮೂದಿಸಿದೆ.

ಅಂದರೆ ಈ ವಿಧೇಯಕ ಕಾಯ್ದೆಯಾದ ಮೇಲೆ ಅಸ್ತಿತ್ವಕ್ಕೆ ಬರುವ ಮೂರು ನಗರ ಪಾಲಿಕೆಯಲ್ಲಿ `ಬೆಂಗಳೂರು' ಎಂಬುದು ಇರುವುದಿಲ್ಲ. ಬಿಬಿಎಂಪಿಯನ್ನು ಎರಡು ಅಥವಾ ಮೂರು ಭಾಗ ಮಾಡಲು ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015 ಮಂಡಿಸಲಾಗಿದ್ದು, ಅದರಂತೆ ಮುಂದೆ ರಚನೆಯಾಗಲಿರುವ ನಗರ ಪಾಲಿಕೆಗಳಲ್ಲಿ `ಬೆಂಗಳೂರು' ಕೈಬಿಡಲಾಗಿದೆ.

ವಿಧೇಯಕದಲ್ಲಿ ಏನೇನಿದೆ?: ಬೆಂಗಳೂರು ಮಹಾನಗರ ಪಾಲಿಕೆಯ ಜನಸಂಖ್ಯೆ 80 ಲಕ್ಷ ಮೀರಿದೆ. ಆದ್ದರಿಂದ ರಾಜ್ಯ ಅಥವಾ ಕೇಂದ್ರದ ಯೋಜನೆಗಳು ಕಾರ್ಯಗತಗೊಳ್ಳುವುದನ್ನು
ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸುಗಮ ಆಡಳಿತ ನಿರ್ವಹಣೆ ಉದ್ದೇಶಕ್ಕಾಗಿ, ಸರ್ಕಾರ ನೇಮಿಸಿದ ತಜ್ಞರ ಸಮಿತಿ ಸಹ ತನ್ನ ಮಧ್ಯಂತರ ವರದಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ತ್ರಿ-ಭಜನೆಗೆ ಶಿಫಾರಸು ಮಾಡಿದೆ.

ಆದ್ದರಿಂದ ಬಿಬಿಎಂಪಿಯನ್ನು ಎರಡು ಅಥವಾ ಮೂರು ನಗರ ಪಾಲಿಕೆಗಳನ್ನಾಗಿ ಪುನಾರಚನೆ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಆದಕಾರಣ, ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ನ್ನು (1977ರ ಕರ್ನಾಟಕ ಅಧಿನಿಯಮ 14) ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ದೊಡ್ಡ ನಗರ ಪ್ರದೇಶವಾದ ಬೆಂಗಳೂರು ಮಹಾನಗರ ಪಾಲಿಕೆ ಪುನಾರಚನೆ
* ಈ ಅಧಿನಿಯಮದಲ್ಲಿ ಅಥವಾ ಯಾವುದೇ ನ್ಯಾಯಾಲಯ, ಪ್ರಾಧಿಕಾರದ ಯಾವುದೇ ತೀರ್ಪು, ಡಿಕ್ರಿ, ಆದೇಶದಲ್ಲಿ ಏನೇ ಒಳಗೊಂಡಿದ್ದರೂ ರಚನೆಯಾದ ದೊಡ್ಡ ನಗರವಾದ ಬೆಂಗಳೂರು ಮಹಾನಗರ ಪಾಲಿಕೆ ಪುನಾರಚನೆ ಉದ್ದೇಶಕ್ಕಾಗಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅದರ ಅಸ್ತಿತ್ವ ಸಮಾಪನಗೊಳ್ಳಲಿದೆ.

* ರಾಜ್ಯಪಾಲರು, ಪೂರ್ವ ಪ್ರಕಟಣೆ ತರುವಾಯ ಅಧಿಸೂಚನೆ ಮೂಲಕ ಹಿಂದಿನ ದೊಡ್ಡನಗರ ಪ್ರದೇಶವಾದ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಗಳನ್ನು ರಾಜ್ಯ ಸರ್ಕಾರವು ಮಾಡಿದ ಶಿಫಾರಸಿನಷ್ಟು ಸಂಖ್ಯೆಯ ಹೊಸ ನಗರ ಪಾಲಿಕೆ ರಚಿಸಬೇಕು. ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶ ಇರುತ್ತದೆ. ಇದಕ್ಕಾಗಿ ರಾಜ್ಯಪತ್ರ ಹೊರಬೀಳುತ್ತದೆ.

* ನಂತರ ಸರ್ಕಾರದ ಶಿಫಾರಸಿನಷ್ಟು ಸಂಖ್ಯೆಯ ಹೊಸ ನಗರ ಪಾಲಿಕೆಗಳನ್ನು ಅವುಗಳ ಪ್ರದೇಶ, ಗಡಿ ನಿರ್ದಿಷ್ಟಪ ಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು.

* ಎಲ್ಲ ಋಣಗಳು, ಬಾಧ್ಯತೆಗಳು, ಎಲ್ಲ ಗುತ್ತಿಗೆಗಳನ್ನು ಹೊಸ ನಗರ ಪಾಲಿಕೆಗಳಿಗೆ ವಹಿಸಲಾಗುತ್ತದೆ. ಅಧಿಕಾರಿಗಳು, ನೌಕರರು ಹೊಸ ನಗರ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರಾಗಬೇಕು. ಹಿಂದಿನ ವೇತನ, ಭತ್ಯೆಗಳು ಅನ್ವಯ. ಸೇವೆಯ ಷರತ್ತು ಒಳಪಡುತ್ತದೆ.

* ಬೆಂಗಳೂರು ಮಹಾನಗರ ಪಾಲಿಕೆ ಎಲ್ಲ ಕೌನ್ಸಿಲರುಗಳು, ಮೇಯರ್, ಉಪ ಮೇಯರ್ ಪದಧಾರಣೆ ಮಾಡಿರುವುದು ತಕ್ಷಣದಿಂದ ನಿಂತುಹೋಗುತ್ತದೆ. ನಗರಪಾಲಿಕೆಗೆ ಮತ್ತು ಸ್ಥಾಯಿಸಮಿತಿಗಳ ಎಲ್ಲ ಅಧಿಕಾರ ಹಾಗೂ ಕರ್ತವ್ಯಗಳನ್ನು ಆಡಳಿತಾಧಿಕಾರಿ ಚಲಾಯಿಸಲಿದ್ದಾರೆ.

* ಈಗಿರುವ 12 ಸ್ಥಾಯಿ ಸಮಿತಿಗಳು ರದ್ದಾಗುತ್ತವೆ. ಸ್ಥಾಯಿ ಸಮಿತಿಗಳ ಸಂಖ್ಯೆ ನಾಲ್ಕಾಗುತ್ತದೆ. ತೆರಿಗೆ, ಹಣಕಾಸು ಮತ್ತು ಅಪೀಲು; ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ; ನಗರ ಯೋಜನೆ ಮತ್ತು ಸುಧಾರಣೆ; ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಇರುತ್ತವೆ. ಇದರಲ್ಲಿ ತಲಾ ಏಳು ಕೌನ್ಸಿಲರ್‍ಗಳು ಸದಸ್ಯರಾಗಿರುತ್ತಾರೆ.

* ಬಿಬಿಎಂಪಿ ಎಂಬ ಪದಗಳಿಗೆ `ನಗರ ಪಾಲಿಕೆ' ಎಂಬ ಪದ ಉಪಯೋಗಿಸಬೇಕು. ಅಗತ್ಯ ಸಂದರ್ಭದಲ್ಲಿ `ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಗಳಿಗೆ' ಎಂಬ ಪದ ಬಳಸಬಹುದು.

* ಬೆಂಗಳೂರು ಮಹಾನಗರ ಯೋಜನಾ ಸಮಿತಿ ರಚನೆಯಲ್ಲಿ `ಬೆಂಗಳೂರು' ಎಂಬ ಪದ ಬಿಡತಕ್ಕದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com