ವಾಟಾಳ್‍ಗೆ ಅಕ್ರಮ ಬಂಧನ

ವಿಧಾನಸೌಧ ಆವರಣದಲ್ಲಿರುವ ಬ್ಯಾಂಕ್‍ಗೆ ತೆರಳಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ವಿಧಾನಸೌಧ ಪೊಲೀಸರು ಸೋಮವಾರ ಅಕ್ರಮವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ...
ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್

ಬೆಂಗಳೂರು: ವಿಧಾನಸೌಧ ಆವರಣದಲ್ಲಿರುವ ಬ್ಯಾಂಕ್‍ಗೆ ತೆರಳಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ವಿಧಾನಸೌಧ ಪೊಲೀಸರು ಸೋಮವಾರ ಅಕ್ರಮವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ವಾಟಾಳ್ ನಾಗರಾಜ್ ಅವರು, ಎಂದಿನಂತೆ ವಿಧಾನಸೌಧಕ್ಕೆ ಕಾರಿನಲ್ಲಿ ಆಗಮಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ತೆರಳುತ್ತಿದ್ದರು. ಆದರೆ, ದೇವರಾಜ ಅರಸು ಪ್ರತಿಮೆ ಬಳಿ ಇರುವ ದ್ವಾರದ ಬಳಿಯೇ ಕಾರು ತಡೆದ ಸುಮಾರು 30ರಷ್ಟಿದ್ದ ಪೊಲೀಸರು ಒಳಗೆ ಬಿಡಲು ನಿರಾಕರಿಸಿದರು. ತಾನು ಯಾವುದೇ ಚಳವಳಿ ಮಾಡಲು ಬಂದಿಲ್ಲ. ಮುಚ್ಚು ಮರೆ ಮಾಡಿ ಚಳವಳಿ ಮಾಡುವ ವ್ಯಕ್ತಿ ನಾನಲ್ಲ. ಬ್ಯಾಂಕಿನಲ್ಲಿ ಕೆಲಸವಿದ್ದು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ತಿಳಿ ಹೇಳಿದರೂ, ಪೊಲೀಸರು ನನ್ನನ್ನು ಬಿಡದೆ
ಅನಾಗರಿಕವಾಗಿ ವರ್ತಿಸಿದರು ಎಂದು ವಾಟಾಳ್ ನಾಗರಾಜ್ ಹೇಳಿದರು.

ಬ್ಯಾಂಕಿಗೆ ಹೋಗುತ್ತಿದ್ದೇನೆ. ಬೇಕಿದ್ದರೆ ನನ್ನೊಂದಿಗೆ ನಾಲ್ವರು ಪೊಲೀಸರನ್ನು ಬೇಕಿದ್ದರೆ ಕಳುಹಿಸಿ ಎಂದೇ. ಆದರೆ, ಅದಕ್ಕೂ ಒಪ್ಪಲಿಲ್ಲ. ಅಂತಿಮವಾಗಿ ನನ್ನ ಚಾಲಕನನ್ನು ಬ್ಯಾಂಕಿಗೆ ಕಳುಹಿಸುತ್ತೇನೆ, ಆತನನ್ನು ಬಿಡಿ ಎಂದು ಹೇಳಿದೆ. ಅದಕ್ಕೊಪ್ಪಿದ ಅವರು, ಆತನ ಹಿಂದೆ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿದರು. ಹೀಗೆ, ನನ್ನನ್ನು ದರೋಡೆಕೋರನಂತೆ ಪೊಲೀಸರು ನೋಡಿದ್ದಾರೆ.

ಅಂತಿಮವಾಗಿ ಕಾರಣವಿಲ್ಲದೇ ನನ್ನನ್ನು ಬಂಧಿಸಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೂ ಅಕ್ರಮ ಬಂಧಿಸಿ ಠಾಣೆಯಲ್ಲಿರಿಸಿದ್ದರು. ಬಂಧನಕ್ಕೆ ಯಾವುದೇ ಕಾರಣ ತಿಳಿಸಿಲ್ಲ. ಕುಡಿಯಲು ನೀರು ಕೊಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ನನಗೆ ಬಿಡುಗಡೆ ಮಾಡಿದ್ದಾರೆ.

ಕಾರಣ ನೀಡದೆ ಅಕ್ರಮವಾಗಿ ಬಂಧಿಸಿರುವುದು ಖಂಡನೀಯ. ಮಾಜಿ ಶಾಸಕ, ಹೋರಾಟಗಾರನಿಗೆ ಇಂತಹ ಗತಿಯಾದರೆ ರಾಜ್ಯದ ಸಾಮಾನ್ಯ ನಾಗರಿಕರ ಕತೆಯೇನು? ಪೊಲೀಸರ ಈ ದೌರ್ಜನ್ಯದ ವಿರುದ್ಧ ಮಂಗಳವಾರ ಗೃಹ ಸಚಿವ ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com