
ಬೆಂಗಳೂರು: ಹೃದಯ ಸೇರಿದಂತೆ ಅಂಗಾಂಗ ದಾನದ ಅರಿವು ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಅವುಗಳ ದಾನಕ್ಕೆ ಮುಂದಾಗುವ ದಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಇದಕ್ಕೆ ಮಂಗಳವಾರ ಮತ್ತೊಂದು ಸೇರ್ಪಡೆಯಾಗಿದ್ದು, ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗ ದಾನಕ್ಕೆ ಕುಟುಂಬ ಸದಸ್ಯರು ಮುಂದಾಗಿದ್ದಾರೆ. ವೃತ್ತಿ ಯಲ್ಲಿ ಪೇಂಟರ್ ಆಗಿರುವ ಮೈಸೂರು ರಸ್ತೆ ಆನಂದ ನಗರ ವಿಜಯ್(27) ಎಂಬುವವರು ಮೆದು ಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಕಳೆದ ಕೆಲವು ವರ್ಷಗಳಿಂದ ಬಳಲುತ್ತಿದ್ದರು.
ರಕ್ತ ಹೆಪ್ಪುಗಟ್ಟಿ ಮೊದಲಿನ ಸ್ಥಿತಿಗೆ ಬರುವುದು ಅಸಾಧ್ಯ ಎಂದು ವೈದ್ಯರ ಕೈ ಚೆಲ್ಲಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ವಿಜಯ್ ಅವರಿಗೆ ಸಂಗೀತಾ ಎಂಬುವವರೊಂದಿಗೆ ವಿವಾಹವಾಗಿದ್ದು ಕಿಶೋರ್ (4) ಹಾಗೂ ಸಚಿನ್(2) ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ವಿಜಯ್ ಕೆಲವು ತಿಂಗಳ ಹಿಂದೆ ಮನೆ ಸಮೀಪ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಅದಾದ ಕೆಲವು ದಿನಗಳ ನಂತರ ವಿಜಯ್ ಗೆ ಆಗಾಗ ತಲೆ ಸುತ್ತು ಬರುತ್ತಿತ್ತು. ಕಡಿಮೆ ರಕ್ತದೊತ್ತಡದಿಂದ ಹೀಗಾಗುತ್ತಿದೆ ಎಂದು ನಿರ್ಲಕ್ಷಿಸುತ್ತಿದ್ದರೇ ಹೊರತು, ಆಸ್ಪತ್ರೆಗೆ ಹೋಗಿರಲಿಲ್ಲ. ಆದರೆ, ಈ ಸಮಸ್ಯೆ ಇತ್ತೀಚೆಗೆ ತೀವ್ರವಾಗಿತ್ತು.
ಕಳೆದ ಶುಕ್ರವಾರ (ಏ.17) ಮನೆ ಮುಂಭಾಗದಲ್ಲಿಯೇ ತಲೆ ಸುತ್ತು ಬಂದು ವಿಜಯ್ ಬಿದ್ದಿದ್ದರು. ಕೂಡಲೇ ಪತ್ನಿ ಹಾಗೂ ಸ್ಥಳೀಯರು ನಿಮ್ಹಾನ್ಸ್ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಗಂಭೀರ ಸ್ಥಿತಿ ಇದೆ. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಕುಟುಂಬದ ಒಪ್ಪಿಗೆಯ ನಂತರ ಶಸ್ತ್ರ ಚಿಕಿತ್ಸೆಯೂ ನೆರವೇರಿತು. ಆದರೂ, ವಿಜಯ್ ಪರಿಸ್ಥಿತಿ ಸುಧಾರಿಸಲಿಲ್ಲ. ಅಲ್ಲದೇ, ವಿಜಯ್ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರಿಂದ ಯಾವುದೇ ಚಟುವಟಿಕೆ ಸಾಧ್ಯವಿಲ್ಲವೆಂದು ವೈದ್ಯರು ವಿಜಯರ್ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.
ನೋವಲ್ಲೂ ಅಂಗಾಂಗ ದಾನಕ್ಕೆ ಮುಂದು:
ವೈದ್ಯರ ಮಾತಿನಿಂದ ಆಕಾಶವೇ ಕಳಚಿ ಬಿದ್ದಂತಾದ ಬಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಕೊನೆಗೆ ಸ್ನೇಹಿತರೆಲ್ಲರಿಗೂ ಇತ್ತೀಚೆಗೆ ನಗರದಲ್ಲಿ ಅಂಗಾಂಗ ದಾನದ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು. ಇದನ್ನು ಅರಿತ ವಿಜಯ್ ಕುಟುಂಬವೂ ಹೃದಯ ಸೇರಿ ಇತರೆ ಅಂಗಾಂಗಗಳ ದಾನಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಿಜಯ್ ನನ್ನು ನಿಮ್ಹಾನ್ಸ್ ದ ಆ್ಯಂಬುಲೆನ್ಸ್ ಮೂಲಕ ಮಂಗಳವಾರ ರಾಜರಾಜೇಶ್ವರಿ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಕೆಲವು ವೈದ್ಯಕೀಯ ಪರೀಕ್ಷೆಗಳು ಹಾಗೂ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವ ಅಗತ್ಯವಿದೆ. ಹೀಗಾಗಿ, ಎರಡು ದಿನ ನಿಗಾದಲ್ಲಿರಿಸಿ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಅಂಗಾಂಗಗಳನ್ನು ಯಾರಿಗೆ ದಾನ ಮಾಡಬೇಕು? ಯಾವ ಆಸ್ಪತ್ರೆಗೆ ತಲುಪಿಸಬೇಕು ಎನ್ನುವುದು ನಿರ್ಧಾರವಾಗುತ್ತದೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
Advertisement