
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಮೂರು ಹೋಳು ಮಾಡುವ ಸಿದ್ದರಾಮಯ್ಯ ಸರ್ಕಾರದ ಕ್ರಮ ರಾಜಧಾನಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಿ ಸೃಷ್ಟಿಸಿದೆ. ಇದನ್ನು ಪಕ್ಕಕ್ಕಿಟ್ಟು ನೋಡುವವರಿಗೆ ದೆಹಲಿ ಮಹಾನಗರ ಪಾಲಿಕೆ ಹೋಳಿನ ಗೋಳು ಒಂದು ಪಾಠವಾದೀತು.
ತ್ರಿವಿಭಜನೆಯ ಬಳಿಕ ಆಗುವ ಅನುಕೂಲ, ಪ್ರತಿಕೂಲ ಪರಿಣಾಮಗಳ ಕುರಿತು ಸ್ಪಷ್ಟ ಚಿತ್ರಣ ಸಿಕ್ಕೀತು. ಬೆಂಗಳೂರಿಗೆ ಹೋಲಿಸಿದರೆ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ವಿಸ್ತಾರ ದೊಡ್ಡದು. 1.5 ಕೋಟಿ ಜನ ಸಂಖ್ಯೆಯಿರುವ ದೆಹಲಿ ದೇಶದ ರಾಜಧಾನಿ ಕೂಡ ಹೌದು. ಹಾಗಾಗಿ ಸಹಜವಾಗಿಯೇ ಇಷ್ಟೊಂದು ದೊಡ್ಡ ಪಾಲಿಕೆಯನ್ನು ಅಭಿವೃದ್ಧಿ ದೃಷ್ಟಿಯಿಂದ 3 ವಿಭಜನೆ ಮಾಡುವ ಪ್ರಸ್ತಾಪ ರಾಜಕೀಯವಾಗಿ ಆಕರ್ಷಕವಾಗಿ ಕಂಡಿತ್ತು. ಅದರಂತೆ 2012ರಲ್ಲಿ ಉತ್ತರ, ದಕ್ಷಿಣ ಹಾಗೂ ಪೂರ್ವ ಎಂದು ಪಾಲಿಕೆ ವಿಭಜನೆ ಆಯ್ತು.
ದಿವಾಳಿಯ ಹಂತ
ದೆಹಲಿ ಪಾಲಿಕೆ ಮೂರು ಹೋಳಾಗಿ ಇನ್ನೂ ಸರಿಯಾಗಿ ಮೂರು ವರ್ಷವೂ ಆಗಿಲ್ಲ. ಅಷ್ಟರಲ್ಲೇ ಉತ್ತರ ಮತ್ತು ಪೂರ್ವ ಪಾಲಿಕೆಗಳು ದಿವಾಳಿ ಪರಿಸ್ಥಿತಿಗೆ ತಲುಪಿವೆ. 2015ರಿಂದ ನೌಕರರ ವೇತನ ಪಾವತಿಸಲೂ ಆಗದ ಸ್ಥಿತಿಗೆ ಈ ಎರಡು ಪಾಲಿಕೆಗಳು ಬಂದು ನಿಂತಿವೆ. ಒಂದಾಗೋಣ ಬಾರಾ: ದಿನಕ್ಕೊಂದರಂತೆ ಸೃಷ್ಟಿಯಾಗುತ್ತಿರುವ ಹೊಸ ಸಮಸ್ಯೆಯಿಂದ ಬೇಸತ್ತು ಕಳೆದ ತಿಂಗಳು ಈ ಹೋಳಿನ ಗೋಳೇ ಬೇಡ ಮತ್ತೆ ಒಂದಾಗೋಣ ಎನ್ನುವ ಪ್ರಸ್ತಾಪವನ್ನು ಪಾಲಿಕೆಗಳು ಸರ್ಕಾರದ ಮುಂದಿಟ್ಟಿವೆ.
ದೆಹಲಿ ವ್ಯಥೆಯೇ
ದೆಹಲಿಯಲ್ಲಿ ಜನರ ದಾಖಲೆಗಳು ಹಾಗೂ ವಿಭಜನೆಯ ಮೊದಲು ಕೈಗೆತ್ತಿಕೊಳ್ಳಲಾದ ಯೋಜನೆಗಳ ಕಡತಗಳನ್ನು ಹಂಚಿಕೆ ಮಾಡುವುದೇ ನಿಜವಾದ ಸವಾಲಾಗಿತ್ತು. ಇ-ಆಡಳಿತಕ್ಕೆ ಸಂಬಂಧಿಸಿದ ಕೇಂದ್ರೀಯ ಸರ್ವರ್ ಅನ್ನು ವಿಕೇಂದ್ರೀಕರಣ ಮಾಡಬೇಕಿತ್ತು. ಆದರೆ, ಈ ಕೆಲಸಕ್ಕೆ ಕೈಹಾಕಿದಾದ ಸರ್ವರ್ ಕ್ರ್ಯಾಶ್ ಆಯ್ತು. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸ್ತಾ ಇಲ್ಲ, ನಿಮ್ಮ ಕೆಲಸ ಈಗ ಆಗಲ್ಲ ಎಂದು ಸಾರ್ವಜನಿಕರಿಗೆ ಸಮಜಾಯಿಶಿ ನೀಡಿ ಅಧಿಕಾರಿಗಳಿಗೂ ಸಾಕು ಸಾಕಾಗಿ ಬಿಟ್ಟಿತ್ತು.
ಹೀಗಿದೆ ದೇಶದ ರಾಜಧಾನಿಯ ಹೋಳಿನ ಗೋಳು
Advertisement