
ಬೆಂಗಳೂರು: ನಗರದಲ್ಲಿ ಸಂಚರಿಸುವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಾಹನಗಳನ್ನು ಸಿಎನ್‍ಜಿ ಇಂಧನಕ್ಕೆ ಪರಿವರ್ತಿಸುವ ಸಾಧ್ಯತೆಯ ಬಗ್ಗೆ ಕ್ರಿಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಗುರುವಾರ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.
ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಖುದ್ದು ಹಾಜರಿದ್ದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮದನ್ ಗೋಪಾಲ್, ಪರಿಸರ ಸಚಿವಾಲಯದ ಕಾರ್ಯದರ್ಶಿ ರಾಮಚಂದ್ರ ಮತ್ತು ಸಾರಿಗೆ ಇಲಾಖೆ ಆಯುಕ್ತ ರಾಮಲಿಂಗೇಗೌಡ ಅವರಿಗೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಬೆಂಗಳೂರು ನಗರದಲ್ಲಿ ಸಂಚರಿಸುವ ಎಲ್ಲಾ ಸಾರಿಗೆ ಇಲಾಖೆಯ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳನ್ನು ಸಿಎನ್‍ಜಿ ಇಂಧನಕ್ಕೆ ಪರಿವರ್ತಿಸುವ ಕುರಿತು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕಿದೆ. ಈ ಕುರಿತು ಸಾರಿಗೆ ಇಲಾಖೆ ನಿರ್ದೇಶಕರು ಹಾಗೂ ಆಯುಕ್ತರು, ಬಿಬಿಎಂಪಿ, ಕೆಎಸ್‍ಆರ್ ಟಿಸಿ ಮತ್ತು ಕೆಎಸ್‍ಪಿಸಿಬಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರಿಯಾ ವರದಿ ಸಿದ್ಧಪಡಿಸಿ ಏ.29ರದು ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿತು.
ಅಲ್ಲದೆ, ಬೆಂಗಳೂರು ನಗರದಲ್ಲಿ ವಾಯು ಹಾಗು ಶಬ್ದ ಮಾಲಿನ್ಯ ಪ್ರಮಾಣ ಎಷ್ಟಿದೆ ಎಂಬುದರ ಕುರಿತು ಮಾಹಿತಿ ನೀಡಬೇಕು. ನಗರದಲ್ಲಿ ಮಾಲಿನ್ಯ ನಿಯಂತ್ರಿಸಲು ಕೋರ್ಟ್ ನೀಡಬೇಕಾದ ಅಗತ್ಯ ನಿರ್ದೇಶನಗಳ ಕರಡು ತಯಾರಿಸಿ ಕೋರ್ಟ್‍ಗೆ ಸಲ್ಲಿಸಬೇಕು ಎಂದು ಇದೇ ವಿಭಾಗೀಯ ಪೀಠ ಸೂಚಿಸಿತು.
Advertisement