
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಪ್ರತಿಯಾಗಿ ರೈತರ ಮನೆ ಬಾಗಿಲು, ಸಂತೆ ಹಾಗೂ ಮಾರುಕಟ್ಟೆಗೆ ತೆರಳಿ ಜಾಗೃತಿ
ಪ್ರಚಾರ ಕಾರ್ಯ ಮಾಡುವುದಾಗಿ ಬಿಜೆಪಿ ಕಿಸಾನ್ ಮೋರ್ಚಾ ತಿಳಿಸಿದೆ.
ಭೂ ಸ್ವಾಧೀನ ವಿಧೇಯಕ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಮೋದಿ ಸರ್ಕಾರ ರೈತ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪಪ್ರಚಾರಕ್ಕೆ ತೆರೆ ಎಳೆಯಲು ಹಾಗೂ ಜನರಿಗೆ ಸತ್ಯ ತಿಳಿಸುವ ಸಲುವಾಗಿ ರೈತರ ಮನೆಬಾಗಿಲಿಗೆ, ಸಂತೆಗಳಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ತೆರಳಿ ನೈಜ ಸಂಗತಿಗಳನ್ನು ಮನವರಿಕೆ ಮಾಡಿಕೊಡಲಾಗುವುದು.
10 ತಿಂಗಳ ನರೇಂದ್ರ ಮೋದಿಯವರ ಆಡಳಿತದಲ್ಲಿ ತಪ್ಪು ಹುಡುಕಲು ಸಾಧ್ಯವಾಗದ ಪ್ರತಿಪಕ್ಷಗಳು ಇದೀಗ ಭೂ ಸ್ವಾಧೀನ ಕಾಯ್ದೆ ವಿರುದ್ಧ ಅಪಪ್ರಚಾರ ನಡೆಸುತ್ತಿವೆ. ಭೂ ಮಸೂದೆಯಲ್ಲಿ ಕಾರ್ಪೋರೇಟ್ ಪರವಾದ ಹಾಗೂ ರೈತವಿರೋಧಿಯಾದ ಯಾವುದೇ ಅಂಶವಿಲ್ಲ ಎಂದು ಅವರು ಬಿಜೆಪಿ ಕಚೇರಿಯಲ್ಲಿ ಶನಿವಾರ ಹೇಳಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲೂ ರೈತರಿಗೆ ದೊರಕುವ ಪರಿಹಾರ ಧನ ಏರಿಸಲಾಗಿದೆ ಎಂದರು.
ರಾಜ್ಯ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸ್ಥಳೀಯ ಸಮೀಕ್ಷೆಗೆ, ಬೆಳೆ ಹಾನಿಯಿಂದ ಆತಂಕಕ್ಕೊಳಗಾದ ರೈತರಿಗೆ ಸಾಂತ್ವನ ಹೇಳುವುದನ್ನಾಗಲಿ ಮಾಡುತ್ತಿಲ್ಲ. ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ನೆಪ ಮಾತ್ರಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರನ್ನು
ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
-ಆರಗ ಜ್ಞಾನೇಂದ್ರ, ಮಾಜಿ ಶಾಸಕ
Advertisement