ನಗರ ಪೊಲೀಸ್ ಆಯುಕ್ತ ರೆಡ್ಡಿಗೆ ಸಿಬಿಐ ನೋಟಿಸ್
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡದ ತನಿಖೆಯ ದೃಷ್ಟಿ ಈಗ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಕಡೆ ತಿರುಗಿದೆ. ಸೋಮವಾರ ಆಯುಕ್ತರನ್ನು ಭೇಟಿ ಮಾಡಿದ ತನಿಖಾ ತಂಡ ಅರ್ಧಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದು ಇದಕ್ಕೆ ಪುಷ್ಠಿ ನೀಡಿದೆ.
ರವಿ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಎಸ್.ಪಿ ಬಾಲ ಸುಬ್ರಮಣ್ಯ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ, ಸೋಮವಾರ ಮಧ್ಯಾಹ್ನ 3.30ಕ್ಕೆ ಆಯುಕ್ತರ ಕಚೇರಿಗೆ ಆಗಮಿಸಿತ್ತು.
ಪ್ರಕರಣದ ವಿಚಾರಣೆಗೆ ಹಾಜರಾಗುವ ಸಂಬಂಧ ನೋಟಿಸ್ ನೀಡುವುದಕ್ಕಾಗಿಯೇ ಸಿಬಿಐ ಅಧಿಕಾರಿಗಳು ಆಯುಕ್ತರನ್ನು ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.
ತನಿಖಾ ಕಾರ್ಯಗಳಿಗೆ ಎರಡು ವಾಹನ, ಲ್ಯಾಪ್ ಟ್ಯಾಪ್, ಕ್ವಾಟ್ರಸ್, ವೈಫೈ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಒಂದು ಮನವಿ ಪತ್ರ ಸಲ್ಲಿಸಿತ್ತು. ಆ ಪತ್ರದೊಂದಿಗೆ ಸೋಮವಾರ ಆಯುಕ್ತರನ್ನು ಭೇಟಿ ಮಾಡಿ, ತಮಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ನೀಡುವಂತೆ ಚರ್ಚಿಸಿದೆ. ನೋಟಿಸ್ ವಿಚಾರ
ಪ್ರಸ್ತಾಪವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಯುಕ್ತರ ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹರಿ ಶೇಖರ್ ಅವರನ್ನು ಕೂಡ ಸಿಬಿಐ ಅಧಿಕಾರಿಗಳ ತಂಡ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು. ಸಾವಿನ ವೇಳೆ ಎಂ.ಎನ್ ರೆಡ್ಡಿ ಅದೊಂದು ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ