ಕಾಂಗ್ರೆಸ್, ಬಿಜೆಪಿ ಆರ್ಥಿಕ ನೀತಿ ಒಂದೇ: ಸೀತಾರಾಂ ಯೆಚೂರಿ
ಬೆಂಗಳೂರು: ಕಾಂಗ್ರೆಸ್, ಬಿಜೆಪಿ ಆರ್ಥಿಕ ನೀತಿಯಲ್ಲಿ ಯಾವುದೇ ಭಿನ್ನತೆಯಿಲ್ಲ. ಆದ್ದರಿಂದ ಸಂಸತ್ತಿನಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳುವವರೆಗೂ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ನಗರದ ಸಚಿವಾಲಯ ನೌಕರರ ಕ್ಲಬ್‍ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿಪಿಎಂನ 21ನೇ ಮಹಾ ಅಧಿವೇಶನ ಹಾಗೂ ಸಂವಾದದಲ್ಲಿ ಮಾತನಾಡಿ, `ಸಿಪಿಎಂ ಸ್ವಂತ ಬಲದಿಂದ ತನ್ನ
ಸಂಖ್ಯೆ ಹೆಚ್ಚಿಸಿಕೊಳ್ಳುವವರೆಗೂ ಕಾಂಗ್ರೆಸ್, ಬಿಜೆಪಿ ಜತೆ ಯಾವುದೇ ರೀತಿಯ ಬಾಂಧವ್ಯ ಮಾಡುವುದಿಲ್ಲ. ಸಂಸತ್‍ನಲ್ಲಿ ನಮ್ಮ ಬಲಾಬಲ ಕಡಿಮೆ ಇದೆ. ಇದು ನಮ್ಮ ಪಕ್ಷದ ಇತಿಹಾಸದಲ್ಲೇ ಮೊದಲು. ಇದರಿಂದ ಯಾವುದೇ ಹೊಸ ಯೋಜನೆ ಜಾರಿ ವೇಳೆ ಸರ್ಕಾರದ ಮೇಲೆ ನಾವು ಒತ್ತಡ ಹೇರಲು ಸಾಧ್ಯವಾಗುವುದಿಲ್ಲ ಎಂದರು.
ಜನಪರ ಆರ್ಥಿಕ ನೀತಿ ಆಗಬೇಕು. ಈಗಿರುವ ತೆರಿಗೆಯನ್ನು ಸರಿಯಾಗಿ ಸಂಗ್ರಹ ಮಾಡಿದರೆ ಹಾಗೂ ಆ ಹಣವನ್ನು ಸರಿಯಾಗಿ ತೊಡಗಿಸಿಕೊಂಡರೆ ಯುವಕರಿಗೆ ಉದ್ಯೋಗ ಸೃಷ್ಟಿಸಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದರೆ, ಕೆಲವರಿಗೆ ವಿನಾಯಿತಿ ನೀಡುತ್ತಿರುವುದು ಸರಿಯಲ್ಲ. ಅದರಿಂದ ಬಡವರಿಗೆ ತೊಂದರೆಯಾಗುತ್ತದೆ. ದೇಶದ ಶೇ.50ರಷ್ಟು ಶ್ರೀಮಂತರ ಕೈಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಸಂಗ್ರಹವಾಗುತ್ತಿದೆ. ಅದು ನಿಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದರು. ಸಿಪಿಎಂನ ಮುಖಂಡರಾದ ಹನ್ನನ್ ಮುಲ್ಲಾ, ವಿಜಯ ಕೃಷ್ಣನ್, ಜಿ ವಿ ಶ್ರೀರಾಂ ವೆಡ್ಡಿ, ವಿ ಜೆಕೆ ನಾಯರ್, ವಿ ಎನ್ ನಾಗರಾಜ್, ನಿತ್ಯಾನಂದ ಸ್ವಾಮಿ, ಕೆ.ಎನ್ ಉಮೇಶ್, ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.
ಸಂಸದ ಸಾಕ್ಷಿ ಮಹಾರಾಜ್ ಅವರು ಕೋಮುವಾದಕ್ಕೆ ಎಡೆಮಾಡಿಕೊಡುವ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಇಂಥ ಹೇಳಿಕೆ ನೀಡುವವರಿಗೆ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ರೀತಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಪ್ರಧಾನಿ ಶಿಕ್ಷಿಸುವರೇ ಎಂದು ಪ್ರಶ್ನಿಸಿದರು. ಎನ್‍ಡಿಎ ಸರ್ಕಾರದ ಮೇಲೆ ಮೋದಿ ಸರ್ಕಾರ ಇಲ್ಲಿರುವ ಆರ್ಥಿಕ ನೀತಿಗಳ ಮೇಲೆ ತೀವ್ರ ವಾಗ್ದಾಳಿ ಮಾಡಿದ ಯೆಚೂರಿ, ಮೋದಿ ಸರ್ಕಾರ ಅವ್ಯವಸ್ಥಿತವಾಗಿ ವಿದೇಶಿ ಕಂಪನಿಗಳ ಲಾಭಕ್ಕಾಗಿ ಭಾರತದ ಸಂಪನ್ಮೂಲಗಳನ್ನು ಮಾರಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಆಸ್ತಿಯಾದ ಯುವಕರನ್ನು ಒಗ್ಗೂಡಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ