
ಬೆಂಗಳೂರು: ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ದೇವೇಗೌಡರನ್ನೇ ಕೇಳಿಕೊಂಡು ರಾಜ್ಯ ಸರ್ಕಾರ ನಿರ್ವಹಿಸಲು ಸಾದ್ಯವಿಲ್ಲ. ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ನಿಲುವಿಗೆ ಕಾನೂನು ಸಚಿವ ಟಿ.ಬಿ ಜಯಚಂದ್ರ ತಿರುಗೇಟು ನೀಡಿದ್ದಾರೆ.
ಮೇಕೆದಾಟು ಯೋಜನೆ ವಿಳಂಬವಾಗುತ್ತಿದೆ ಎಂದು ದೇವೇಗೌಡ ಹಾಗೂ ಅವರ ಮಕ್ಕಳು ಸರ್ಕಾರದ ಮೇಲೆ ಗೂಬೆ ಕೂರಿಸಿದರು. ಆದರೆ, ಈಗ ಸರ್ಕಾರ ಸಕರಾತ್ಮಕವಾಗಿ ಹೆಜ್ಜೆ ಇಡುತ್ತಿದ್ದರೆ ಸಹಕಾರ ನೀಡುವುದಿಲ್ಲ. ಪ್ರತಿಯೊಂದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅವರಿಗೆ ಕರಗತವಾಗಿದೆ. ದೇವೇಗೌಡ ಅಥವಾ ಕುಮಾರಸ್ವಾಮಿ ನಿಯೋಗದ ಜತೆ ಬರಲಿ, ಬಿಡಲಿ, ಸಿಎಂ ನೇತೃತ್ವದ ನಿಯೋಗ ಪ್ರಧಾನಿ ಭೇಟಿ ಮಾಡಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಲಿದೆ ಎಂದು ಜಯಚಂದ್ರ ಹೇಳಿದ್ದಾರೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ. ಮೇಕೆದಾಟು ಯೋಜನೆಗೆ ಬೆಂಬಲ ಹಾಗೂ ಭಾಷಾ ಮಾಧ್ಯಮ ಕುರಿತು ಸಂವಿಧಾನ ತಿದ್ಧುಪಡಿಗೆ ಆಗ್ರಹಿಸಿ ಗುರುವಾರ ಪ್ರಧಾನಿ ಅವರನ್ನು ಭೇಟಿ ಮಾಡುತ್ತೇವೆ. ತಮಿಳುನಾಡು ನಿಯೋಗ ಕೂಡ ಪ್ರಧಾನಿ ಭೇಟಿ ಮಾಡಿರುವುದು ಗಮನಕ್ಕೆ ಬಂದಿದೆ. ಆದರೆ ಕಾನೂನು ರಾಜ್ಯದ ಪರವಾಗಿದೆ. ಕೇವಲ ರಾಜಕೀಯಕ್ಕೆ ತಮಿಳುನಾಡು ವಿವಾದ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
Advertisement