
ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾ. ಕೆಂಪಣ್ಣ ಆಯೋಗಕ್ಕೆ ವಾಸ್ತಾವಾಂಶದ ದಾಖಲೆಗಳನ್ನು ಗುರುವಾರ ಸಲ್ಲಿಸಿದೆ. ಸಂಜೆ 4ಗಂಟೆ ವೇಳೆಗೆ ಸರ್ಕಾರದ ಪರ ವಿಶೇಷ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಆಯೋಗಕ್ಕೆ ದಾಖಲೆಗಳ ವರದಿ ಸಲ್ಲಿಸಿದರು.
ಅರ್ಕಾವತಿ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಒಟ್ಟಾರೆ ಸಾವಿರಕ್ಕೂ ಹೆಚ್ಚು ಪುಟಗಳ ಸರ್ಕಾರಿ ದಾಖಲೆಗಳಿದ್ದ ಮೂರು ಸಂಪುಟವನ್ನು ರಾಜ್ಯ ಸರ್ಕಾರ ನ್ಯಾ. ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿದೆ. ಈ ಹಿಂದೆ ಇದ್ದ ಸರ್ಕಾರಗಳು ಆಂದರೆ 2003 ರಿಂದ 2012 ರ ಜುಲೈ 12 ರ ಅವಧಿವರೆಗೂ 198 ಎಕರೆ 20 ಗುಂಟೆ ಜಾಗವನ್ನು ಸೆಕ್ಷನ್ 48(1)ರ ಅನ್ವಯ ಡಿನೋಟಿಫೈ ಮಾಡಿ ಆದೇಶಿಸಿವೆ. ಈಗಿರುವ ರಾಜ್ಯ ಸರ್ಕಾರ ಅರ್ಕಾವತಿ ಪ್ರಕರಣದಲ್ಲಿ ಸುಪ್ರಿಂ ಮತ್ತು ಹೈಕೋರ್ಟ್ ನಿರ್ದೇಶನದಂತೆ ಮಾರ್ಪಾಡು ಮಾಡಿದ ಯೋಜನೆಗೆ ಮಾತ್ರ ಅನುಮೋದನೆ ನೀಡಿದೆ. ಸದ್ಯ ಅಧಿಕಾರದಲ್ಲಿರುವ ಸರ್ಕಾರ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಒಂದು ಇಂಚು ಜಾಗವನ್ನೂ ಸಹ ಡಿನೋಟಿಫೈ ಮಾಡದೇ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಮಂಡಿಸಿದ್ದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಪ್ರಕಾರ ನಡೆದುಕೊಂಡಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಆರೋಪ ಬಂದಿತ್ತು: ಅರ್ಕಾವತಿ ಡಿನೋಟಿಫಿಕೇಷನ್ ಹಗರಣದ ಬಗ್ಗೆ ಬಿಜೆಪಿ ಕಳೆದ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಪ್ರಸ್ತಾಪಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. ಈ ಬಗ್ಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ದಾಖಲೆ ನೀಡಿ 540 ಎಕರೆ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಸಾಕಷ್ಟು ಆರೋಪ ಪ್ರತ್ಯಾರೋಪಗಳು, ನಡೆದು ಪ್ರಕರಣದ ತನಿಖೆಯನ್ನು ಆಯೋಗಕ್ಕೆ ವಹಿಸಲಾಗಿತ್ತು. ಈ ಆಯೋಗದ ಅವಧಿ ಆರು ತಿಂಗಳಾಗಿತ್ತು. ನಂತರ ಅವಧಿಯನ್ನು ವಿಸ್ತರಿಸಲಾಗಿತ್ತು. ಬಿಜೆಪಿ ವತಿಯಿಂದ ಅರ್ಕಾವತಿ ಕರ್ಮಕಾಂಡದ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಲಾಗಿತ್ತು. ಜೆಡಿಎಸ್ ನಿಂದ ಅರ್ಕಾವತಿ ಕರ್ಮಕಾಂಡ ಸಂಪುಟ ಬಿಡುಗಡೆಯಾಗಿತ್ತು. ಆದರೆ ಸರ್ಕಾರ ಆಯೋಗಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ. ಈಗ ಸರ್ಕಾರವೂ ದಾಖಲೆಗಳನ್ನು ಒದಗಿಸಿದೆ.
Advertisement