ಬಿಬಿಎಂಪಿ ಚುನಾವಣಾ ಕಣಕ್ಕಿಳಿದ ಕಾಂಗ್ರೆಸ್ ಉಸ್ತುವಾರಿ ಸಚಿವರು

ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಮಯ ಹತ್ತಿರ ವಾಗುತ್ತಿರುವಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಮಂತ್ರಿಗಳ ಬಿರುಸಿನ ಚಟುವಟಿಕೆ ...
ಕೆಪಿಸಿಸಿ ಕಚೇರಿ
ಕೆಪಿಸಿಸಿ ಕಚೇರಿ
Updated on

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಮಯ ಹತ್ತಿರ ವಾಗುತ್ತಿರುವಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಮಂತ್ರಿಗಳ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೂ ಒಬ್ಬೊಬ್ಬ ಸಚಿವರಿಗೆ ಉಸ್ತುವಾರಿ ಹೊಣೆ ಇದ್ದು, ಅದನ್ನು ನಿರ್ವಹಿಸುವ ಕೆಲಸವನ್ನು ಭಾನುವಾರದಿಂದಲೇ ಆರಂಭಿಸಿದ್ದಾರೆ. ಈ ವಾರದ ಅಂತ್ಯದಲ್ಲಿ ಕಾಂಗ್ರೆಸ್‍ನ ಪ್ರಥಮ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ 198 ವಾರ್ಡ್‍ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೇ ಆರಂಭವಾಗಿದ್ದು, ಪ್ರತಿ ವಾರ್ಡ್‍ಗೆ 3-4 ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸಲು ನಿರ್ಧರಿಸಿದೆ. ವಿಧಾನಸಭೆ ಕ್ಷೇತ್ರವಾರು ಈ ಪಟ್ಟಿ ಸಿದ್ಧವಾಗಲಿದೆ. ಆ.5 ಅಂದರೆ ಬುಧವಾರ ದೊಳಗೆ ಈ ವಿಧಾನಸಭೆವಾರು ಪಟ್ಟಿ ಸಿದ್ಧತೆಗೆ ಸೂಚಿಸಲಾಗಿದೆ. ಅದನ್ನು ಚುನಾವಣೆ ಸಮಿತಿಯ ಮುಂದಿಡಲಾಗುತ್ತದೆ.ಗುರುವಾರ ಅಥವಾ ಶುಕ್ರವಾರ ಚುನಾವಣೆ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಅಂತಿಮಗೊಂಡ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುತ್ತದೆ.

ಕಾಂಗ್ರೆಸ್ ಬಿಬಿಎಂಪಿ ಚುನಾವಣೆ ಯನ್ನು ಅತ್ಯಂತ ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿರುವುದರಿಂದ ಮಂತ್ರಿಗಳಿಗೇ ಅದರ ಜವಾಬ್ದಾರಿ ನೀಡಿದೆ. ನಗರದಲ್ಲೇ ತಮ್ಮ ಶಾಸಕ ಸ್ಥಾನ ಹೊಂದಿರುವ ಐವರು ಮಂತ್ರಿಗಳಿಗೆ ಅವರವರ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಗಾಂಧಿ ನಗರಕ್ಕೆ ದಿನೇಶ್ ಗುಂಡೂರಾವ್, ಬ್ಯಾಟರಾಯನಪುರಕ್ಕೆ  ಕೃಷ್ಣ ಬೈರೇಗೌಡ, ಬಿಟಿಎಂ ಬಡಾವಣೆಗೆ ರಾಮಲಿಂಗಾರೆಡ್ಡಿ, ಸರ್ವಜ್ಞನಗರಕ್ಕೆ ಕೆ.ಜೆ. ಜಾರ್ಜ್, ಶಿವಾಜಿನಗರಕ್ಕೆ ರೋಷನ್ ಬೇಗ್ ಅವರನ್ನೇ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಇನ್ನು ರಾಜಾಜಿನಗರದ ಜವಾಬ್ದಾರಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗಿ ದ್ದು, ಅವರು ಭಾನುವಾರ ಕ್ಷೇತ್ರದ ಮುಖಂಡರ ಸಭೆಯನ್ನು ನಡೆಸಿದ್ದಾರೆ.

ಎರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ನಿಗದಿಯಾಗಿದೆ. ಸಚಿವರಾದ ಎಸ್.ಆರ್.ಪಾಟೀಲ್, ಬಿ.ಟಿ.ಪರಮೇಶ್ವರ್ ನಾಯಕ್, ಕಿಮ್ಮನೆ ರತ್ನಾಕರ, ರಮಾ ನಾಥರೈ ಸೇರಿದಂತೆ ಎಲ್ಲ ಸಚಿವರಿಗೂ ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ.ಅಲ್ಪಸಂಖ್ಯಾತ ಮುಖಂಡರ ಸಭೆ: ಈ ನಡುವೆ ಕಾಂಗ್ರೆಸ್‍ನ ಅಲ್ಪಸಂಖ್ಯಾತ ಮುಖಂಡರು ಕೂಡ ಭಾನುವಾರ ಸಭೆ ನಡೆಸಿದ್ದಾರೆ. ಬಿಬಿಎಂಪಿ ಚುನಾವಣೆ ಯಲ್ಲಿ ಕೇವಲ ಸಮುದಾಯವನ್ನು ಮಾತ್ರ ಗುರುತಿಸಿ ಟಿಕೆಟ್ ನೀಡುವ ಬದಲು ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬಿಬಿಎಂಪಿಯ ಅಧಿಕಾರ ಹಿಡಿಯುವುದೇ ಈ ಬಾರಿಯ ಪ್ರಮುಖ ಮಂತ್ರವಾಗಿರ ಬೇಕು. ಇದಕ್ಕಾಗಿಯೇ ಜಾತ್ಯತೀತವಾ ದದಲ್ಲೇ ಟಿಕೆಟ್ ಹಂಚಿಕೆಯಾಗಬೇಕು. ಅದರಂತೆಂಯೇ ಎಲ್ಲ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ತಿನ ಸದಸ್ಯ ನಜೀರ್ ಅಹ್ಮದ್, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ವಾರ್ತಾ ಸಚಿವ ರೋಷನ್ ಬೇಗ್ ಮತ್ತಿತರರು ಭಾಗವಹಿಸಿದ್ದರು. ಪ್ರತಿ ವಾರ್ಡ್‍ಗೆ 3-4 ಅಭ್ಯರ್ಥಿಗಳ ಪಟ್ಟಿ ಸಿದ್ದತೆಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com