ಬೆಂಗಳೂರು ಪಾಲಿಕೆಯ ಪ್ರಥಮ ಇತಿಹಾಸ

ರಾಜಧಾನಿ ಬೆಂಗಳೂರಿನ ಪ್ರಥಮ ಆಡಳಿತದ ಮೊದಲ ಬಜೆಟ್ ಮೊತ್ತ ಬರೀ ರು. 21 ಸಾವಿರ! ಅದು 1862ರಲ್ಲಿ. 1950ರಲ್ಲಿ ಬೆಂಗಳೂರು ರಾಜ್ಯ...
ಬಿಬಿಎಂಪಿ
ಬಿಬಿಎಂಪಿ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಥಮ ಆಡಳಿತದ ಮೊದಲ ಬಜೆಟ್ ಮೊತ್ತ ಬರೀ ರು. 21 ಸಾವಿರ! ಅದು 1862ರಲ್ಲಿ. 1950ರಲ್ಲಿ ಬೆಂಗಳೂರು ರಾಜ್ಯದ ಮೊದಲ ಪಾಲಿಕೆ ಯಾದಾಗ ಬಜೆಟ್ ಮೊತ್ತ ರು. 59ಲಕ್ಷಕ್ಕೇರಿತು. ಇನ್ನು ಜನಸಂಖ್ಯೆ ನೋಡಿದರೆ, 1950ರಲ್ಲಿ ಕೇವಲ 2.48 ಲಕ್ಷವಿತ್ತು. ಇಡೀ ಪಾಲಿಕೆಗೆ ಆಗ ಇದ್ದುದು 50 ವಾರ್ಡ್, 75 ಸದಸ್ಯರು. ಸುಮಾರು 65 ವರ್ಷಗಳ ಹಿಂದೆ ಸ್ಥಾಪನೆಯಾದ ಬೆಂಗಳೂರು ನಗರ ಪಾಲಿಕೆ ಉಗಮ ಹೇಗಾಯಿತು? ಅಂದಿನ ರಾಜಕೀಯ ಹೋರಾಟಗಳು ಹೇಗಿದ್ದವು? ಜನಪ್ರತಿನಿಧಿಗಳ ಆಡಳಿತ ವೈಖರಿ ಹೇಗಿತ್ತು ಎಂದು ನೋಡುವುದಾದರೆ ಅದೊಂದು ಅಚ್ಚರಿಯ ಪಯಣ.

ಬೆಂಗಳೂರು ಅವಳಿ ನಗರ: ಇತಿಹಾಸ ನೋಡಿದರೆ ಬೆಂಗಳೂರು 1902ರಿಂದ 1940ವರೆಗೂ ಹುಬ್ಬಳ್ಳಿ-ಧಾರವಾಡದಂತೆ ಅವಳಿ ನಗರಗಳಾಗಿದ್ದವು.ಇದಕ್ಕೆ ಆಗ ಎರಡು ಆಡಳಿತ ಕೇಂದ್ರ. ಅದರಲ್ಲಿ ಹಳೇ ಬೆಂಗಳೂರು ಎನ್ನುವುದು ಒಂದಾದರೆ, ಡಿಫೆನ್ಸ್ ಪ್ರದೇಶ ಎನ್ನುವುದು ಮತ್ತೊಂದಾಗಿತ್ತು. ನಗರ ಆಡಳಿತ ದಿವಾನರ ಕೈಯಲ್ಲಿದ್ದರೆ, ಕಂಟೋನ್ಮೆಂಟ್ ಪ್ರದೇಶದ ಆಡಳಿತವನ್ನುಮನಿಸಿಪ್ ರೆಸಿಡೆಂಟ್ ನೋಡಿಕೊಳ್ಳುತ್ತಿದ್ದರು. ಆದರೆ, ಸ್ವಾತಂತ್ರ್ಯಾನಂತರ ಬೆಂಗಳೂರಿಗೆ ಎರಡು ಆಡಳಿತ ವ್ಯವಸ್ಥೆ ಏಕೆ ಇರಬೇಕೆಂಬ ಪ್ರಶ್ನೆ ಎದ್ದಿತು. ಅಂತಿಮವಾಗಿ ಎರಡೂ ಆಡಳಿತವನ್ನು ಸಂಯೋಜನೆ ಮಾಡಿ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಆರಂಭಿಸಲಾಗುತ್ತದೆ. ಆದರೆ, ಅದಕ್ಕೆ ಚುನಾವಣೆ ನಡೆಸುವವರೆಗೂ ಪಾಲಿಕೆಯನ್ನು ಖಾಲಿ ಬಿಡಬಾರದು ಎಂದು ಹಂಗಾಮಿ ಮೇಯರ್, ಉಪ ಮೇಯರ್‍ಗಳನ್ನು ಆಯ್ಕೆ ಮಾಡಲಾಗುತ್ತದೆ. ಹಳೇ ಬೆಂಗಳೂರಿನ ಮುನ್ಸಿಪಲ್ ಕೌನ್ಸಿಲ್‍ಗೆ ಅಧ್ಯಕ್ಷರಾಗಿದ್ದ ಆರ್. ಸುಬ್ಬಣ್ಣ ಅವರನ್ನೇ ಹಂಗಾಮಿ ಮೇಯರ್ ಮಾಡಲಾಗುತ್ತದೆ. ವಿ.ಪಿ. ದಿನದಯಾಳು ನಾಯ್ಡು ಹಂಗಾಮಿ ಉಪ ಮೇಯರ್ ಆಗುತ್ತಾರೆ.

ಮೊದಲ ಚುನಾವಣೆ ಹೇಗಿತ್ತು?: ರಾಜ್ಯದ ಪ್ರಥಮ ನಗರ ಪಾಲಿಕೆಯಾಗಿ 1949ರಲ್ಲಿ ಅಂದಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರಿಂದ ಉದ್ಘಾಟನೆಗೊಂಡ ನಂತರ 1950
ಡಿಸೆಂಬರ್ 23ರಂದು ಪಾಲಿಕೆಗೆ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್ ಮತ್ತು ಸೋಷಿಯಲಿಸ್ಟ್ ಪಕ್ಷದ ನಡುವೆ ಭಾರೀ ಪೈಪೋಟಿ ಉಂಟಾಗಿತ್ತು. ಇದರಲ್ಲಿ ಕಾಂಗ್ರೆಸ್ 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಸೋಷಿಯಲಿಸ್ಟ್ 35 ಮಂದಿಯನ್ನು ಸ್ಪರ್ಧೆಗಿಳಿಸಿತ್ತು. ಕಾಂಗ್ರೆಸ್‍ನ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಇದರೊಂದಿಗೆ
ಕಾಂಗ್ರೆಸ್ ಒಟ್ಟು 45 ಸ್ಥಾನಗಳನ್ನು ಗಳಿಸುತ್ತದೆ. ಆದರೆ ಸೋಸಿಯಲಿಸ್ಟ್ ಪಕ್ಷ 20 ಸ್ಥಾನಗಳನ್ನು ಗಳಿಸುವುದರಲ್ಲೇ ಸುಸ್ತಾಗುತ್ತದೆ. ಹಾಗೆಯೇ ಮಹಿಳೆಯರು, ತಳ
ವರ್ಗದವರು, ವ್ಯಾಪಾರ ಕ್ಷೇತ್ರ ಮತ್ತು ಕೈಗಾರಿಕಾ ಕ್ಷೇತ್ರಗಳಿಂದ 5 ಮಂದಿ ಪಕ್ಷೇತರ ಅಭ್ಯರ್ಥಿಗಳು ಆರಿಸಿ ಬಂದರು. ಅಂತಿಮವಾಗಿ ಹೆಚ್ಚು ಸದಸ್ಯ ಬಲದ ಕಾಂಗ್ರೆಸ್‍ಗೆ ಅ„ಕಾರ ಸಿಗುತ್ತದೆ. ಆ ಪಕ್ಷದ ಆರ್. ಅನಂತರಾಮನ್ ಮೇಯರ್ ಆಗುತ್ತಾರೆ. ಎಂ.ಜಯಶೀಲನ್ ಉಪ ಮೇಯರ್ ಆಗುತ್ತಾರೆ. ಸರ್ಕಾರದ ಪ್ರತಿನಿಧಿಯಂತೆ ಆಯುಕ್ತರಾಗಿ ಮೀರ್ ಸರ್ದಾರ್ ಹುಸೇನ್ ಬರುತ್ತಾರೆ.



ಬರೀ 50 ವಾರ್ಡ್ ಅಷ್ಟೆ!
2.48 ಲಕ್ಷ ಜನಸಂಖ್ಯೆಯ ಅಂದಿನ ಬೆಂಗಳೂರು ನಗರ ಪಾಲಿಕೆಗೆ ಇದ್ದ ವಾರ್ಡ್‍ಗಳ ಸಂಖ್ಯೆ ಬರೀ 50. ಪ್ರತಿ ವಾರ್ಡ್‍ಗೆ 15,000 ಮಂದಿಯಂತೆ ವಿಂಗಡಿಸಲಾಗಿತ್ತು. ಆದರೆ, ಸದಸ್ಯರು 75 ಇರುತ್ತಿದ್ದರು. 6 ಮಂದಿ ಸದಸ್ಯರನ್ನು ತಳಮಟ್ಟದ ವರ್ಗಗಳಿಂದ ಆಯ್ಕೆ ಮಾಡಲಾಗುತ್ತಿತ್ತು. ಶೇ. 50ರಷ್ಟು ಮಹಿಳೆಯರನ್ನು ಆಯ್ಕೆಮಾಡಲಾಗುತ್ತಿತ್ತು. ಕಾರ್ಮಿಕ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಿಂದಲೂ ಕೆಲವರನ್ನು ಆಯ್ಕೆ ಮಾಡಲಾಗುತ್ತಿತ್ತು. ಇನ್ನು ಇಡೀ ನಗರದ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಐದು ಸ್ಥಾಯಿ ಸಮಿತಿಗಳನ್ನು ರಚಿಸಲಾಗುತ್ತಿತ್ತು. ಅವುಗಳೆಂದರೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಆರೋಗ್ಯ, ಲೆಕ್ಕಪತ್ರ, ಕಾಮಗಾರಿಗಳು ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳನ್ನು ಮೇಯರ್ ಚುನಾವಣೆ ನಂತರ ಅಸ್ತಿತ್ವಕ್ಕೆ ತರಲಾಗುತ್ತಿತ್ತು.


ಬಜೆಟ್ ಹೇಗಿತ್ತು?
1862ರಲ್ಲಿ ಬೆಂಗಳೂರು ತನ್ನದೇ ಆದ ಮುನಿಸಿಪಲ್ ಕೌನ್ಸಿಲ್ ಇತ್ತು. ಇದರ ವಾರ್ಷಿಕ ನಿಧಿ ಕೇವಲ ರು. 21,000 ಮಾತ್ರ. ಆದರೆ, ಹಳೇ ಬೆಂಗಳೂರು ನಗರ ಸಭೆ ಮತ್ತು ಕಂಟೋನ್ಮೆಂಟ್‍ಗಳು ಒಂದಾಗಿ 1950 ವೇಳೆಗೆ ಪಾಲಿಕೆ ಅಸ್ತಿತ್ವಕ್ಕೆ ಬರುವ ವೇಳೆಗೆ ಪಾಲಿಕೆ ಬಜೆಟ್ ಮೊತ್ತ ರು. 59 ಲಕ್ಷ ಆಗಿತ್ತು. ಇದಕ್ಕೆ ಆಸ್ತಿ ತೆರಿಗೆ, ಮಹಾತರಫ್ ಟ್ಯಾಕ್ಸ್ ಮತ್ತು ಉದ್ದಿಮೆ ಪರವಾನಗಿ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದಲ್ಲದೆ ಆರಂಭದಲ್ಲಿ ಬ್ರಿಟಿಷ್ ಸರ್ಕಾರದ ಅನುದಾನ ನಂತರ ಜನಪ್ರತಿನಿಧಿಗಳ ಸರ್ಕಾರದ ಅನುದಾನವೂ ಪಾಲಿಕೆಗೆ ಸಿಗಲಾರಂಭಿಸಿತು.



ಆರಂಭದ 10 ಆಯುಕ್ತರು
ಜಾರ್ಜ್ ಮ್ಯಾಥನ್
ಮೀರ್ ಸಫ್ದರ್  ಹುಸೇನ್
ಎನ್.ಎಸ್. ಹಿರಣ್ಣಯ್ಯ
ಬಿ.ಎಂ. ಅಬು ಬೇಕರ್
ಕೆ. ಹೆಂಜೇರಪ್ಪ
ಡಿ.ಆರ್. ಚೆನ್ನರುದ್ರಯ್ಯ
ಕೆ. ಮೊಹಮ್ಮದ್ ಅಹಮ್ಮದ್
ಕೆ. ನರಸಿಂಹ ಅಯ್ಯಂಗಾರ್
ಎನ್. ಸಿದ್ದಲಿಂಗಪ್ಪ
ಎಂ.ಎಸ್. ಸ್ವಾಮಿನಾಥನ್

ಆರಂಭದ 10 ಮೇಯರ್‍ಗಳು
ಆರ್. ಸುಬ್ಬಣ್ಣ 1949
ಕೇಶವ ಐಯ್ಯಂಗಾರ್ 1950
ಆರ್. ಅನಂತರಾಮನ್ 1951
ಬಿ.ವಿ. ಲಂಕಪ್ಪ 1952
ಪಿ. ಹನುಮಂತಯ್ಯ 1953
ಎಚ್.ಎಸ್. ಸೀತಾರಾಮ್ 1954
ದಿನದಯಾಳು ನಾಯ್ಡು 1955
ಎಂ. ಕೃಷ್ಣಪ್ಪ 1956
ಜೀನಾಭಾಯಿ ದೇವಿದಾಸ್ 1957
ವೈ. ರಾಮಚಂದ್ರ 1958

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com