ಹಿಂದೆಂದೂ ನೋಡದ ಪ್ರಮಾಣದಲ್ಲಿ ರೈತರ ಆತ್ಮಹತ್ಯೆ: ದೇವೇಗೌಡ

ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿ ಸಾಲಕ್ಕೆ ಪರಿಹಾರ ಕಲ್ಪಿಸದಿದ್ದರೆ ಆ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕು...
ಮಾಜಿ ಪ್ರಧಾನಿ  ಎಚ್.ಡಿ ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಬೆಂಗಳೂರು: ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿ ಸಾಲಕ್ಕೆ ಪರಿಹಾರ ಕಲ್ಪಿಸದಿದ್ದರೆ ಆ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕು. ಸುಮಾರು ಐದು ಸಾವಿರ ಕೋಟಿಯಷ್ಟು ರೈತರ ಸಾಲ-ಬಡ್ಡಿ ಇದ್ದು ಅದನ್ನು ರಾಜ್ಯ ಸರ್ಕಾರವೇ ಮನ್ನಾ ಮಾಡಿ `ಕ್ರೆಡಿಟ್' ಪಡೆದುಕೊಳ್ಳಬೇಕು. ಹಣ ಹೊಂದಿಸುವುದು ಹೇಗೆ ಎಂಬುದನ್ನು ಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನೇ ಸಲಹೆ ನೀಡುತ್ತೇನೆ' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ರೈತರ ಸಾಲ ಬಡ್ಡಿ ಮನ್ನಾಗೆ ಕೇಂದ್ರವು ಕ್ರಮ ಕೈಗೊಳ್ಳಬೇಕು. ಅವರು ಈ ಕ್ರಮಕ್ಕೆ ಹಿಂದೆ ನೋಡಿದರೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿ. ಒಟ್ಟಾರೆ 4ರಿಂದ 5 ಸಾವಿರ ಕೋಟಿ ಹಣ ಇದಾಗುತ್ತದೆ.

ಬೆಂಗಳೂರಿನಲ್ಲಿ ಭೂಮಿ ಒತ್ತುವರಿಯಾಗಿರುವುದನ್ನು ವಶಕ್ಕೆ ಪಡೆದುಕೊಂಡು ಅದನ್ನು ಹರಾಜು ಮಾಡಿದರೆ, ರಾಜ್ಯ ಸರ್ಕಾರಕ್ಕೆ ಅದಕ್ಕಿಂತ ಅದೆಷ್ಟೋ ಹಣ ಬರುತ್ತದೆ. ರೈತರ ಬಗ್ಗೆ ಕಾಳಜಿಯಿದ್ದರೆ ಇದನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜ್ಯ ಸರ್ಕಾರ ರೈತರ ಎಲ್ಲ ಸಾಲವನ್ನು ತಾನೇ ವಹಿಸಿ ಕೊಳ್ಳಬೇಕು. ಈ ಬಗ್ಗೆ ಎಲ್ಲ ಬ್ಯಾಂಕ್‍ಗಳಿಗೆ ಸೂಕ್ತ ಆದೇಶ ಹೊರಡಿಸಿ, ರೈತರ ಸಾಲ ಹಾಗೂ ಬಡ್ಡಿಗೆ `ಅಂಡರ್ ಟೇಕಿಂಗ್' ಕೊಡಬೇಕು. ಆಗ ರೈತರು ನಿರಾಳರಾಗುತ್ತಾರೆ.

ಅಲ್ಲದೆ, ಹೊಸ ಸಾಲಕ್ಕೆ ಹಿಂದಿನ ಯಾವುದೇ ಸಾಲವನ್ನು ಮಾನದಂಡವಾಗಿ ಅನುಸರಿಸದೆ, ಸಾಲ ನೀಡಬೇಕು ಎಂದೂ ಸೂಚಿಸಬೇಕು ಎಂದು ಒತ್ತಾಯಿಸಿದರು. `ನನ್ನ ರಾಜಕೀಯ ಜೀವನದ 50 ವರ್ಷದಲ್ಲಿ ಹಿಂದೆಂದೂ ನೋಡದಷ್ಟು ಪ್ರಮಾಣದಲ್ಲಿ ಈ ವರ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.ಆದರೆ, ಈ ಬಾರಿ ಅವರ ಸಂಖ್ಯೆ ಈಗ ಹೆಚ್ಚಾಗಿದೆ. ಅವರ ಸಾವಿಗೆ ಸಾಲವೊಂದೇ ಕಾರಣವಲ್ಲ, ಬೇರೆ ಎಂದು ರಾಜ್ಯ ಸರ್ಕಾರವೇ ಬರೆಯಿಸುತ್ತಿದೆ. ಇದು ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭೆ ಕಲಾಪದಲ್ಲಿ ಯಾವಾಗ ಯಾರನ್ನು ಅಮಾನತು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು.

ಯುಪಿಎ ಎರಡು ಅವಧಿ ಅಧಿಕಾರ ಮಾಡಿದ್ದಾರೆ. ಈಗ ಜನ ಎನ್‍ಡಿಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಮೊದಲು ಕೆಲಸ ಮಾಡಲಿ, ಏನಿದ್ದರೂ ಅದನ್ನು ಜನರ ಮುಂದೆ ಇಡಿ ಎಂದು ಕಿವಿಮಾತು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com