ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಮಗು, ತಾಯಿ ಭೇಟಿ ಮಾಡಿದ ಸಮಿತಿ ಅಧ್ಯಕ್ಷ ಉಗ್ರಪ್ಪ

ಇಂದಿರಾ ನಗರ ಶಾಲೆಯಲ್ಲಿ 3 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ...
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ

ಬೆಂಗಳೂರು: ಇಂದಿರಾ ನಗರ ಶಾಲೆಯಲ್ಲಿ 3 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿರುವ ಬಾಲಕಿ ಹಾಗೂ ಪಾಲಕರ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು.

ಶಾಲೆಗಳು ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೂ ಮೊದಲು ಅವರ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಪರಿಶೀಲಿಸಬೇಕು. ಆದರೆ, ಸದ್ಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಗೌತಮ್ ಹಿನ್ನೆಲೆಯನ್ನು ಶಾಲೆಯವರು ಪರಿಶೀಲಿಸಿಲ್ಲ. ಆತನ ಸಹೋದರಿ ಶಾಲಾ ಆಡಳಿತ ಮಂಡಳಿಯ ಸದಸ್ಯರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಭರವಸೆಯ ಮೇಲೆ  ನೇಮಕ ಮಾಡಿಕೊಳ್ಳಲಾಗಿತ್ತು. ಅದು ಬಿಟ್ಟರೆ ಬೇರಾವುದೇ ಪರಿಶೀಲನೆ ನಡೆಸಿಲ್ಲ. ಅದು ಅಲ್ಲದೇ ಅವನ ಹೆಸರನ್ನು ನೋಂದಣಿ ಪುಸ್ತಕದಲ್ಲಿ ನಮೂದಿಸಿಲ್ಲ. ಸಂಬಳವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಉಗ್ರಪ್ಪ ಹೇಳಿದರು.

ಶಾಲೆಯ ಕೊಠಡಿ, ಘಟನೆ ನಡೆದ ಸ್ಥಳ ಪರೀಶಿಲನೆ ನಡೆಸಲಾಯಿತು. ಶಾಲೆಯಲ್ಲಿ ಸಿಸಿಟಿವಿಗಳು ಇವೆ. ಆದರೆ, ಘಟನೆ ನಡೆದಿದೆ ಎನ್ನಲಾದ ಸಮಯ ಅಂದರೆ ಬೆ.8.45ರಿಂದ 11.30ರವರೆಗೆ ಮಗು ಎಲ್ಲಿತ್ತು ಎನ್ನುವುದು ಪರಿಶೀಲಿಸಬೇಕು. ನಾವು ಬರುತ್ತಿರುವ ಮಾಹಿತಿ ಅರಿತ ಶಾಲೆ ಪ್ರಾಂಶುಪಾಲ, ಮುಖ್ಯಸ್ಥರು ಇರಲಿಲ್ಲ. ಅವರು ಯಾವುದೇ ಹಿನ್ನೆಲೆ ಪರಿಶೀಲಿಸದೆ ಗಾರ್ಡ್ ನೇಮಿಸಿಕೊಂಡಿರುವುದು ಗೊತ್ತಾಗಿದೆ. ಇದನ್ನು ಗಮನಿಸಿದರೆ ಶಾಲೆಯಲ್ಲಿ ಆರಂಭದಿಂದಲೇ ಲೋಪದೋಷ ಇರುವುದು ಕಂಡು ಬಂದಿದೆ ಎಂದು ಉಗ್ರಪ್ಪ ಹೇಳಿದ್ದಾರೆ. ಶಾಲೆಯಲ್ಲಿ 35 ಸಿಬ್ಬಂದಿ ಕಾರ್ಯ ನಿರ್ವಹಿ ಸುತ್ತಿದ್ದು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್‍ಕೆಜಿ, ಯುಕೆಜಿಗೆ ರೂ. 10 ಸಾವಿರ ಡೋನೇಶನ್ ಹಾಗೂ ತಿಂಗಳಿಗೆ ರೂ. 800 ಶುಲ್ಕ ಪಡೆಯುತ್ತಿರುವುದಾಗಿ ಶಾಲಾ ಶಿಕ್ಷಕರು ಹೇಳಿದ್ದಾರೆ ಎಂದು ಉಗ್ರಪ್ಪ ಹೇಳಿದರು. ಬೌರಿಂಗ್ ಆಸ್ಪತ್ರೆಗೆ ಭೇಟಿ: ತಂಡ ಶಾಲೆಯಲ್ಲಿ ಪರಿಶೀಲನೆ ಬಳಿಕ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿರುವ ಮಗು, ತಾಯಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಆಸ್ಪತ್ರೆ ವೈದ್ಯರೊಂದಿಗೂ ಸಮಾಲೋಚನೆ ನಡೆಸಿದರು. ವೈದ್ಯರು ಹಾಗೂ ಪಾಲಕರ ಪ್ರಕಾರ ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎನ್ನುವುದು ಗೊತ್ತಾಗಿದೆ. ಆದರೆ, ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ. ಅದು ಬಂದ ಬಳಿಕವೇ ನಿಜವಾಗಿಯೂ ದೌರ್ಜನ್ಯ ನಡೆದಿರುವುದು ಸಾಬೀತಾಗಲಿದೆ ಎಂದರು. ನೊಂದ ಮಗುವಿನ ಪಾಲಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಿಸಲು ಅವಕಾಶ ಇರುವ ಬಗ್ಗೆ ಚಿಂತಿಸಿಲಾಗುತ್ತಿದೆ. ಶಾಲೆಗಳಲ್ಲಿ ಸೆಕ್ಯುರಿಟಿ ಗಾರ್ಡ್‍ಗಳ ಹಿನ್ನೆಲೆ ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು ಎಂದು ಶಿಫಾರಸು ಮಾಡಲಾಗುವುದು ಎಂದು ಉಗ್ರಪ್ಪ ಹೇಳಿದರು. ಪರಿಶೀಲನೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪಾಲಕರಲ್ಲಿ ಆತಂಕ
ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಮಕ್ಕಳ ಪಾಲಕರು ತೀವ್ರ ಆತಂಕಿತರಾಗಿದ್ದರು. ಮಂಗಳವಾರ ಕೇವಲ ಈಶಾನ್ಯ ಭಾರತ ಮೂಲದ ಪಾಲಕರು ಮಾತ್ರ ಪ್ರತಿಭಟನೆ ನಡೆಸಿದ್ದು ಇಂದು ಬಹುತೇಕ ಎಲ್ಲಾ ಮಕ್ಕಳ ಪಾಲಕರು ಒಟ್ಟಾಗಿ ಶಾಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಲವು ಸಿಸಿ ಕ್ಯಾಮರಾಗಳಿದ್ದರೂ ದೌರ್ಜನ್ಯ ನಡೆದಿದೆ ಎಂದರೆ ಅದಕ್ಕೆ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ. ಹೀಗಾಗಿ, ಶಾಲೆ ಘಟನೆ ಬಗ್ಗೆ ಪಾಲಕರಿಗೆ ಸೂಕ್ತ ಉತ್ತರ ನೀಡಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಕ್ಕಳ ಸುರಕ್ಷತಾ ನೀತಿ ಸ್ಪಷ್ಟನೆ
ಶಾಲಾ ಮಕ್ಕಳ ಸುರಕ್ಷತೆ ಸಂಬಂಧಿಸಿದಂತೆ ಸಮಗ್ರ ಮಕ್ಕಳ ಸುರಕ್ಷತಾ ನೀತಿಯನ್ನು ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಶಾಲೆಗಳು ಮಾರ್ಗಸೂಚಿ ಪಾಲಿಸಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ. ಎ.ಎಸ್ .ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಕುರಿತು ಇನ್ನೆರೆಡು ವಾರದ ಒಳಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೇ ಸಚಿವ ಸಂಪುಟದಲ್ಲಿ ಈ ಕುರಿತು ಶೀಘ್ರ ಉತ್ತಮ ಫಲಿತಾಂಶ ನೀಡುವ ಭರವಸೆ ಇರುವುದಾಗಿ ಪೀಠ ಅಭಿಪ್ರಾಯಪಟ್ಟಿದೆ

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಸರ್ಕಾರಿ ಶಾಲೆಗಳಲ್ಲಿಯೂ ಸಹ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಸುರಕ್ಷತಾ ಮಾರ್ಗಸೂಚಿ ಅಳವಡಿಸಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇತರ ಸುರಕ್ಷತಾ ಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿಯೂ ಪಾಲಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಈ ವಾದ ಆಲಿಸಿದ ಪೀಠ, ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿರುವ ಸುರಕ್ಷತಾ ಕ್ರಮದ ಕುರಿತು ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆ ಆ.19ಕ್ಕೆ ಮುಂದೂಡಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com