ಆದೇಶ ಪಾಲಿಸದ ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ ಬೇಡ

ಅರ್ಕಾವತಿ ಬಡಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಹಿಂದೆ ನೀಡಿದ ಆದೇಶ ಪಾಲಿಸಲು ವಿಫಲವಾಗಿರುವ ಸಂಬಂಧಪಟ್ಟ ಬಿಡಿಎ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಚುನಾವಣಾ ಆಯೋಗಕ್ಕೆ...
ಕರ್ನಾಟಕ ಹೈ ಕೋರ್ಟ್ (ಸಂಗ್ರಹ ಚಿತ್ರ)
ಕರ್ನಾಟಕ ಹೈ ಕೋರ್ಟ್ (ಸಂಗ್ರಹ ಚಿತ್ರ)

ಬೆಂಗಳೂರು: ಅರ್ಕಾವತಿ ಬಡಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಹಿಂದೆ ನೀಡಿದ ಆದೇಶ ಪಾಲಿಸಲು ವಿಫಲವಾಗಿರುವ ಸಂಬಂಧಪಟ್ಟ ಬಿಡಿಎ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಮುನಿಸ್ವಾಮಿ ಸೇರಿ ಹಲವಾರು ಜನ ಹೈ ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಕೋರ್ಟ್ ನ ಆದೇಶ ಪಾಲನೆಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕಿದ್ದರೂ ಅವರು ಆದೇಶ ಪಾಲನೆಯಲ್ಲಿ ವಿಫಲರಾಗಿದ್ದಾರೆ. ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಬಿಡಿಎ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಆಯೋಗಕ್ಕೆ ಆದೇಶಿಸಿತು.

 ಬೊಂದು ರಾಮಸ್ವಾಮಿ ಮತ್ತು ಬಿಡಿಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಬಡಾವಣೆ ಜಂಟಿ ಸರ್ವೆ ಕಾರ್ಯ ಮತ್ತು ತನಿಖಾ ವರದಿ ಸಲ್ಲಿಸುವಂತೆ ಜು.14ರಂದು ಬಿಡಿಎಗೆ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ ಬಿಡಿಎ ಅಧಿಕಾರಿಗಳು ಅರ್ಜಿದಾರರಿಗೆ ಪ್ರಮಾದ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಪ್ರತಿ ಅರ್ಜಿದಾರರಿಗೆ ತಲಾ ರು.2,000 ನೀಡುವಂತೆ ಜು. 7ರಂದು ದಂಡ ವಿಧಿಸಿ ಆದೇಶಿಸಿತ್ತು. ನಂತರ ಆ ಆದೇಶವನ್ನು ಪೀಠ ಹಿಂಪಡೆದಿತ್ತು.

ಮಂಗಳವಾರ ಅರ್ಜಿ ವಿಚಾರಣೆಗೆ ಆಗಮಿಸಿದಾಗ ಬಿಡಿಎ ಪರ ಹಿರಿಯ ವಕೀಲ ಕೆ.ಎಂ.ನಟರಾಜ್ ವಾದ ಮಂಡಿಸಿ, ಬಿಡಿಎ ಬಳಿ ಸದ್ಯ ಸಮಗ್ರ ವರದಿ ಮಾತ್ರ ಸಿದ್ಧವಿದೆ. ಪ್ರತ್ಯೇಕ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಜಮೀನಿಗೆ ಸಂಬಂಧಿಸಿದಂತೆ ವರದಿ ತಯಾರಾಗಿಲ್ಲ. ಪಾಲಿಕೆ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಪಾಲಿಕೆ ಚುನಾವಣೆಗೆ ನಿಯೋಜಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಪೂರ್ಣ ವರದಿ ಸಲ್ಲಿಸಲು ಕೊಂಚ ಸಮಯಾವಕಾಶ ಬೇಕಾಗುತ್ತದೆ ಎಂದು ಪೀಠದ ಗಮನಕ್ಕೆತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕೋರ್ಟ್ ಆದೇಶ ಪಾಲನೆ ಮಾಡಬೇಕಿದ್ದು ಅಧಿಕಾರಿಗಳ ಆದ್ಯ ಕರ್ತವ್ಯ. ಇದನ್ನು ಪಾಲಿಸದೇ ಅವರು ಬೇರೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಆಯೋಗಕ್ಕೆ ಸೂಚಿಸಿ ವಿಚಾರಣೆಯನ್ನು ಆ.20ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com