
ಬೆಂಗಳೂರು: ಗಮಕವನ್ನು ಹಳ್ಳಿ ಹಳ್ಳಿಗೂ ಪರಿಚಯಿಸುವ ಮೂಲಕ ಬಿಎಸ್ ಎಸ್ ಕೌಶಿಕ್ ನುಡಿಯುವಂತೆ ನಡೆಯುವ ಗಮಕ ಜಂಗಮ ಮೂರ್ತಿಯಾಗಿದ್ದಾರೆ ಎಂದು ವ್ಯಾಖ್ಯಾನಕಾರ ಡಾ. ಎ.ವಿ. ಪ್ರಸನ್ನ ಅಭಿಪ್ರಾಯಿಸಿದರು.
ಕರ್ನಾಟಕ ನೃತ್ಯ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಎಸ್‍ಎಸ್ ಕೌಶಿಕ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಕುಮಾರವ್ಯಾಸನ ಪದ್ಯಗಳನ್ನು ಅದ್ಭುತವಾಗಿ ಗಮಕ ವಾಚಿಸುವ ಕೌಶಿಕ್ ವೇಷಭೂಷಣದಲ್ಲಿ ಕವಿ ವಾಲ್ಮೀಕಿ ರೂಪ ತಾಳುತ್ತಾರೆ ಎಂದು ಬಣ್ಣಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆಯ ವ್ಯಾಖ್ಯಾನಕಾರ ಮಾರ್ಕಂಡೇಯ ಅವಧಾನಿ, ಸರಳ ವ್ಯಕ್ತಿತ್ವ ಹೊಂದಿರುವ ಕೌಶಿಕ್ ಅವರು ಗಮಕವನ್ನು ಎಲ್ಲ ಕಡೆ ಪಸರಿಸಲು ಹಾಗೂ ಗಮಕ ಎಲ್ಲೆ ನಡೆದರೂ ಹೋಗಿ ನೋಡುವಂತಹ ಸ್ವಭಾವ ಬೆಳೆಸಿಕೊಂಡಿದ್ದಾರೆ ಎಂದರು.
ಮೈಸೂರಿನ ಕಾವ್ಯರಂಜಿನಿ ಅಧ್ಯಕ್ಷ ವಿ. ಕೃಷ್ಣಗಿರಿ ರಾಮಚಂದ್ರ ಮಾತನಾಡಿ, ಕುಮಾರವ್ಯಾಸನ ಭಾಮಿನಿ, ವಾರ್ಧಕ ಷಟ್ಬದಿ ಸೇರಿದಂತೆ ಯಾವುದೇ ಪದ್ಯಗಳನ್ನು ಸ್ಥಳದಲ್ಲೇ ಹೇಳುವ ಜೊತೆಗೆ ಕಾವ್ಯ ರಚಿಸುವ ಆಶು ಕವಿಯಾಗಿದ್ದಾರೆ. ರಾಜರತ್ನಂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೆಹಲಿಯಲ್ಲಿ ಗಮಕ ವಾಚನ ಮಾಡಿದ್ದಾರೆ. ಇಂತಹ ಸಮಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವೊಬ್ಬ ಅಧಿಕಾರಿಗಳೂ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗಮಕ ಭೀಷ್ಮ ಹಾಗೂ ಶಂಕರ ವಿಜಯ ಸಂಗ್ರಹ ಪುಸ್ತಕ ಮತ್ತು ಕೌಶಿಕ್ ಅವರ ಕುರಿತ ಸಾಕ್ಷ್ಯಚಿತ್ರವನ್ನು ಪ್ರವಚನಕಾರ ರಾಜಸಿಂಹ ಸುಬ್ಬರಾಯಶರ್ಮ ಅವರು ಬಿಡುಗಡೆ ಮಾಡಿದರು. ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಶಾಸ್ತ್ರಿ, ಎಚ್.ಆರ್. ಕೇಶವಮೂರ್ತಿ, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.
Advertisement