
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ನಿಧಿಯನ್ನು (ಸರ್‍ಪ್ಲಸ್ ಫಂಡ್) ಅಕ್ರಮವಾಗಿ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಹಗರಣ ಸಂಬಂಧ
ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಡಿಎ ಆರ್ಥಿಕ ಸದಸ್ಯನಾಗಿದ್ದ ಇಂಡಿಯನ್ ಸಿವಿಲ್ ಅಕೌಂಟ್ ಸರ್ವಿಸ್ (ಐಸಿಎಎಸ್) ಅಧಿಕಾರಿ ಸಂದೀಪ್ ದಾಸ್, ನಿವೃತ್ತ ಜಾಯಿಂಟ್ ಕಂಟ್ರೋಲರ್ ಎಂ. ಎನ್.ಶೇಷಪ್ಪ ಹಾಗೂ ನಗದು ಗುಮಾಸ್ತ ಸಿ.ವಸಂತ ಕುಮಾರ್ ಬಂಧಿತರು.
ಬಿಡಿಎನಲ್ಲಿ 1997 ಮೇ 12ರಿಂದ 2014ರ ಮಾರ್ಚ್ 31ರ ಅವಧಿಯಲ್ಲಿ ಪ್ರಾಧಿಕಾರದ ಆರ್ಥಿಕ ಸದಸ್ಯರು ಬಿಡಿಎನ ಹೆಚ್ಚುವರಿ ನಿಧಿಯನ್ನು ನಿಶ್ಚಿತ ಠೇವಣೆಯಲ್ಲಿರಿಸಿರುವುದಾಗಿ ಬಿಡಿಎನ ದಾಖಲೆಗಳಲ್ಲಿ ಸುಳ್ಳು ಲೆಕ್ಕ ಪತ್ರ ಬರೆದು, ದಾಖಲೆಗಳ ಸೃಷ್ಟಿಸಿ ಅಕ್ರಮವಾಗಿ ಸರ್ಕಾರಿ ಹಣವನ್ನು ಖಾಸಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ್ದರು. ಮ್ಯೂಚುವಲ್ ಫಂಡ್ ಫಾರಂಗಳಲ್ಲಿ ಪ್ರಾಧಿಕಾರದ ವಿಳಾಸದ ಬದಲಿಗೆ ಬೇರೆ ವಿಳಾಸ ತೋರಿಸಿದ್ದರು. ಈ ಮೂಲಕ ಹೂಡಿಕೆಯಿಂದ ಬಂದ ಲಾಭವನ್ನು ಮತ್ತು ಪ್ರಾಧಿಕಾರದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡು ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ ನೂರಾರು ಕೋಟಿ ರುಪಾಯಿ ನಷ್ಟ ಉಂಟು ಮಾಡಿದ್ದರು ಎಂದು ಅಪಾದಿಸಲಾಗಿದೆ.
ಈ ಬಗ್ಗೆ ಅಂದಿನ ಬಿಡಿಎ ಹಿರಿಯ ಅಧಿಕಾರಿ 2014ರ ನ.28ರಂದು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿರುವುದು ಕಂಡು ಬಂದ ಕಾರಣ ಪ್ರಕರಣವನ್ನು ಸರ್ಕಾರ ಡಿಸೆಂಬರ್‍ನಲ್ಲಿ ಸಿಐಡಿಗೆ ವಹಿಸಿತ್ತು. ಅಲ್ಲದೇ ಪ್ರಕರಣದ ಬಗ್ಗೆ ಸಿಎಜಿ ಇಲಾಖೆಯಿಂದ ವಿಶೇಷ ಆಡಿಟ್ ಮಾಡಿಸಲು ಆದೇಶಿಸಿದೆ. ಆಡಿಟ್ ಕೂಡ ಪ್ರಗತಿಯಲ್ಲಿದೆ. ಬಿಡಿಎ ಆರ್ಥಿಕ ಸದಸ್ಯನಾಗಿದ್ದ ಸಂದೀಪ್ ದಾಸ್‍ನಿಂದ ರು.2,202.90 ಕೋಟಿ, ಶೇಷಪ್ಪ ರು.567.55 ಕೋಟಿ ಹೂಡಿದ್ದರು.
Advertisement