
ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿ ಮೇಲೆ ದೌರ್ಜನ್ಯ ನಡೆದಿರುವ ಘಟನೆ ಬೆಂಗಳುರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.
ದಯಾನಂದ ಸಾಗರ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 22 ವರ್ಷದ ಯುವತಿ ದೌರ್ಜನ್ಯಕ್ಕೊಳಗಾಗಿದ್ದು ತನಗೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲ ತಾಣ ಹಾಗೂ ಪ್ರಧಾನಿಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾಳೆ
ಕಾಲೇಜಿನಿಂದ ಹೊರಟ ವೇಳೆ ತನ್ನ 40 - 50 ವಯಸ್ಸಿನ ವ್ಯಕ್ತಿ ತನ್ನ ಸ್ಕೂಟರ್ ಗೆ ಡಿಕ್ಕಿ ಹೊಡೆದ. ಕೆಳಗೆ ಬಿದ್ದು ಏಳುವಷ್ಟರಲ್ಲಿ ಬಯ್ಯಲು ಪ್ರಾರಂಭಿಸಿದ. ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೂ ಬಿಡದೇ ಸ್ಕೂಟಿಯನ್ನು ಎಳೆದು, ನನ್ನನ್ನೂ ಎಳೆದಾಡಿದ ಎಂದು ಯುವತಿ ಆರೋಪಿಸಿದ್ದಾಳೆ.
ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ ವ್ಯಕ್ತಿಯಿಂದ ಕಾಪಾಡಲು ಕೂಗಿಕೊಂಡರೂ ಸಹಾಯಕ್ಕೆ ಯಾರೂ ಬರಲಿಲ್ಲ. ಬದಲಾಗಿ ಘಟನಾ ಸ್ಥಳದಲ್ಲಿ ನೆರೆದಿದ್ದ 30 ಯುವಕರು ಹಲ್ಲೆ ನಡೆಸಿದ ವ್ಯಕ್ತಿಯಿಂದ ಕಾಪಾಡುವ ಬದಲು ನನ್ನನ್ನೇ ಬಯ್ಯಲು ಪ್ರಾರಂಭಿಸಿ ನನ್ನ ಸ್ಕೂಟರ್ ನ ಕೀಯನ್ನೂ ಕಸಿದುಕೊಂಡು ಅಸಭ್ಯವಾಗಿ ವರ್ತಿಸಿದರು. ಕರೆ ಮಾಡಿ ಸಹಾಯಕ್ಕಾಗಿ ಕರೆಸಿಕೊಂಡ ತನ್ನ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ದೌರ್ಜನ್ಯದ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ, ಪ್ರಕರಣ ದಾಖಲಿಸಿಕೊಳ್ಳುವ ಬದಲು ಇದೊಂದು ಸಣ್ಣ ಅಪಘಾತದ ಪ್ರಕರಣ ಎಂದು ಪೊಲೀಸರೇ ಅಪಮಾನ ಮಾಡಿದ್ದಾರಂತೆ. ಈ ಘಟನೆಯಿಂದ ನೊಂದಿರುವ ಯುವತಿ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾಳೆ. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಜಾರಿ ಮಾಡಿರುವ ಪ್ರಧಾನಿ ಮೋದಿ, ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾಳೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದಯಾನಂದ ಸಾಗರ್ ಕಾಲೇಜ್ ನ ಪ್ರಾಂಶುಪಾಲ ಡಾ. ಪ್ರಕಾಶ್, 4 ಗಂಟೆ ವೇಳೆ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕಾಲೇಜಿನಿಂದ ಹೊರಟ ನಂತರ ಈ ಘಟನೆ ನಡೆದಿದೆಯಾದರೂ ಇದು ಆತಂಕಕಾರಿ ಎಂದು ಹೇಳಿದ್ದಾರೆ. ದೌರ್ಜನ್ಯ ನಡೆದ ಬಗ್ಗೆ ಯುವತಿ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಕುಮಾರಸ್ವಾಮಿ ಪೊಲೀಸ್ ಠಾಣೆಯ ಅಧಿಕಾರಿಗಳು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದು, ಇದೊಂದು ಸಣ್ಣ ಅಪಘಾತ ಪ್ರಕರಣವಾಗಿದೆ. ಪ್ರಕರಣದ ಸಂಬಂಧ ಓರ್ವ ಆಟೋ ಚಾಲಕನನ್ನು ಬಂಧಿಸಲಾಗಿದೆ. ಯುವತಿ ದೂರಿನಲ್ಲಿ ನೀಡಿರುವ ದ್ವಿಚಕ್ರ ವಾಹನದ ಸಂಖ್ಯೆ ಆರ್.ಟಿ.ಒ ದಾಖಲೆಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. ವಾಹನಕ್ಕಾಗಿ ಶೋಧಕಾರ್ಯ ಪ್ರಾರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement