ಕೊಲೆ ಮಾಡಿ ಜೈಲಿಗೋಯ್ತೀನಿ...: ಸಂಸದ ಜಿ.ಮಾದೇಗೌಡ

ನೀವೊಬ್ರು ಮಿನಿಸ್ಟ್ರು, ಇವ್ನೊಬ್ಬ ಡಿಸಿ. ನಿಮ್ಮೆಲ್ರುನು ಕೊಲೆ ಮಾಡಿ ಜೈಲಿಗೆ ಹೋಗ್ತೀನಿ...' ಮಾಜಿ ಸಂಸದ ಜಿ.ಮಾದೇಗೌಡರು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರೆದುರು ತಮ್ಮ ಆಕ್ರೋಶ ಹೊರಹಾಕಿದ...
ಮಾಜಿ ಸಂಸದ ಜಿ.ಮಾದೇಗೌಡ (ಸಂಗ್ರಹ ಚಿತ್ರ)
ಮಾಜಿ ಸಂಸದ ಜಿ.ಮಾದೇಗೌಡ (ಸಂಗ್ರಹ ಚಿತ್ರ)

ಮಂಡ್ಯ: `ನೀವೊಬ್ರು ಮಿನಿಸ್ಟ್ರು, ಇವ್ನೊಬ್ಬ ಡಿಸಿ. ನಿಮ್ಮೆಲ್ರುನು ಕೊಲೆ ಮಾಡಿ ಜೈಲಿಗೆ ಹೋಗ್ತೀನಿ...' ಮಾಜಿ ಸಂಸದ ಜಿ.ಮಾದೇಗೌಡರು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರೆದುರು ತಮ್ಮ ಆಕ್ರೋಶ ಹೊರಹಾಕಿದ ಪರಿ ಇದು.

ಮಂಡ್ಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಬರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಜತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆಯಿತು. ಸಭೆ ನಡೆಯುತ್ತಿದ್ದಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೆ ಜಿ.ಮಾದೇಗೌಡರು ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಹತ್ತು ನಿಮಿಷಗಳ ಕಾಲ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಜಿಲ್ಲಾಧಿಕಾರಿಯೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿ ಸಚಿವ ಪಾಟೀಲ್ ಅಲ್ಲಿಂದ ತೆರಳಿದರು. ಆದರೆ, ಸಭೆಯಲ್ಲಿ ಸಚಿವರ ಪಕ್ಕದಲ್ಲಿಯೇ ಕುಳಿತಿದ್ದ ಜಿ. ಮಾದೇಗೌಡರು, `ಜಿಲ್ಲಾಧಿಕಾರಿಗಳತ್ತ ಕೈ ತೋರಿಸುತ್ತಾ ನೀವೆಲ್ಲಾ ಕೆಲ್ಸಕ್ಕೆ ಬಾರ್ದಿರೊ ಇಂಥ ಅಧಿಕಾರಿಗಳ ಮಾತು ಕೇಳಿಕೊಂಡು ರಾಜ್ಯಭಾರ ಮಾಡ್ತಿದ್ದೀರ' ಎಂದು ಹರಿಹಾಯ್ದರು.

`ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಗೆ 25 ಎಕರೆ ಜಮೀನು ಕೇಳಿದ್ವೊ. ಅದಕ್ಕೆ ಸಿಎಂ ಮತ್ತು ನೀವು ಒಪ್ಪಿಗೆ ನೀಡಿದ್ದೀರಿ. ಅದನ್ನ ಪರಿಶೀಲಿಸಿ, ಜಮೀನು ಸರ್ವೆ ಮಾಡಿ ಸರ್ಕಾರಕ್ಕೆ ವರದಿ
ಕೊಡಬೇಕಾದ ಡಿಸಿ ಆ ಜಾಗನ ಟ್ರಸ್ಟ್ ಗೆ ಕೊಡೋಕೆ ಬರೋಲ್ಲ ಅಂತ ವರದಿ ಕೊಟ್ಟಾವ್ನೆ. ಇವ್ನಿಗೆ ಏನ್ಮಾಡ್ಬೇಕು ಹೇಳಿ' ಎಂದು ಗೌಡರು ಪ್ರಶ್ನಿಸಿದರು. ಆಗ ಸಚಿವ ಶ್ರೀನಿವಾಸ್ ಪ್ರಸಾದ್, `ವರದಿ ಕೊಡೋದು ಡಿಸಿ ಕೆಲ್ಸ. ಅದನ್ನು ಮಾಡಿ ಮುಗ್ಸಿದ್ದಾರೆ. ಅದೇನಾಗಿದೆ ಅಂತ ನಾನು ನೋಡ್ಕೊತ್ತೀನಿ ಬಿಡಿ' ಎಂದು ಜಿಲ್ಲಾಧಿಕಾರಿ ಪರ ನಿಂತರು. ಇದರಿಂದ ಕುಪಿತಗೊಂಡ ಗೌಡರು ತಮ್ಮ ಆಕ್ರೋಶ ಹೊರಹಾಕಿದರು. `ಇಂತಹ ಡಿಸಿ ನಮಗೆ ಬೇಕಾಗಿಲ್ಲ. ವರ್ಗಾವಣೆ ಮಾಡಿ, ಇಲ್ಲದಿದ್ದರೆ ನಾವೇ ಹೊಡೆದೋಡಿಸ್ತೀವಿ. ನಾವು ಜೈಲಿಗೆ ಹೋದರು ಪರವಾಗಿಲ್ಲ' ಎಂದು ಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com