ನಮ್ಮ ಮೆಟ್ರೊಗೆ ಹಣ ಪೋಲು

`ನಮ್ಮ ಮೆಟ್ರೊ' ಶೇ.60ರಷ್ಟು ಅಧಿಕ ವೆಚ್ಚ ಮಾಡುತ್ತಿದ್ದು, ಈಗಾಗಲೇ ಕಾಮಗಾರಿ ಸಾಕಷ್ಟು ತಡವಾಗಿದೆ. ಬಿಎಂಆರ್‍ಸಿಎಲ್‍ನಲ್ಲಿ ತಜ್ಞರ ಕೊರತೆ ಹಾಗೂ ಪದೇ ಪದೇ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ದೆಹಲಿ ಮೆಟ್ರೋ...
ನಮ್ಮ ಮೆಟ್ರೊ, ಬೆಂಗಳೂರು (ಸಂಗ್ರಹ ಚಿತ್ರ)
ನಮ್ಮ ಮೆಟ್ರೊ, ಬೆಂಗಳೂರು (ಸಂಗ್ರಹ ಚಿತ್ರ)

ಬೆಂಗಳೂರು: `ನಮ್ಮ ಮೆಟ್ರೊ' ಶೇ.60ರಷ್ಟು ಅಧಿಕ ವೆಚ್ಚ ಮಾಡುತ್ತಿದ್ದು, ಈಗಾಗಲೇ ಕಾಮಗಾರಿ ಸಾಕಷ್ಟು ತಡವಾಗಿದೆ. ಬಿಎಂಆರ್‍ಸಿಎಲ್‍ನಲ್ಲಿ ತಜ್ಞರ ಕೊರತೆ ಹಾಗೂ ಪದೇ ಪದೇ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ದೆಹಲಿ ಮೆಟ್ರೋ ರೈಲ್ವೆ ನಿಗಮದ ಹಿರಿಯ ಸಲಹೆಗಾರ ಡಾ. ಇ.ಶ್ರೀಧರನ್ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, `ನಮ್ಮ ಮೆಟ್ರೊ'ದ ಇತ್ತೀಚೆಗಿನ ಬೆಳವಣಿಗೆ ದೇಶದ ಜನರಲ್ಲಿ ನಿರಾಸೆ ಮೂಡಿಸಿದೆ. ಡಿಎಂಆರ್‍ಸಿ ನೀಡಿದ ಸಲಹೆಗಳನ್ನು
ಹಾಗೂ ಯೋಜನಾ ವರದಿಯಲ್ಲಿನ ಅಂಶ-ಗಳನ್ನು ಅಧಿಕಾರಿಗಳು ಕಡೆಗಣಿಸಿದ್ದು, ತಮಗೆ ಎಲ್ಲ ತಿಳಿದಿದೆ ಎಂಬಂತೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಯೋಜನಾ ವರದಿಗೆ ಕಾಮಗಾರಿಯನ್ನು ಸೀಮಿತಗೊಳಿಸದೆ, ಹೊಸ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಆಗಾಗ್ಯೆ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಿಸುವುದು ಹಾಗೂ ಈ ಸ್ಥಾನಕ್ಕೆ ತಜ್ಞರನ್ನು ನೇಮಿಸದಿರುವುದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದರು.

ತಡವಾದ ಸುರಂಗ: ಮೆಜೆಸ್ಟಿಕ್‍ನಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ 2 ವರ್ಷಗಳಷ್ಟು ತಡವಾಗಿದೆ. ಮೊದಲಿಗೆ ಸುರಂಗ ಮಾರ್ಗ ಆರಂಭಿಸಿ ನಂತರ ಸಾಮಾನ್ಯ ಮಾರ್ಗಗಳನ್ನು ನಿರ್ಮಿಸುವಂತೆ ಡಿಎಂಆರ್‍ಸಿಯಿಂದ ಸಲಹೆ ನೀಡಲಾಗಿತ್ತು. ಆದರೆ ಇದನ್ನು ಕಡೆಗಣಿಸಿದ್ದರಿಂದ ಕಾಮಗಾರಿ ತಡವಾಗಿದೆ.

ಸಂಸ್ಥೆಗಳು ಸಾರ್ವಜನಿಕರ ಹಣಕ್ಕೆ ಜವಾಬ್ದಾರಿಯಾಗಿರಬೇಕು. ದೆಹಲಿ ಮೆಟ್ರೊ ಶೀಘ್ರದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಬೇರೆ ಎಲ್ಲ ಮೆಟ್ರೊಗಳು ಇದರ ಸಲಹೆ
ಪಡೆದುಕೊಂಡಿವೆ. 7 ನಗರಗಳಲ್ಲಿ ಮೆಟ್ರೊ ಆರಂಭವಾಗಿದ್ದು, 5 ನಗರಗಳಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಇವೆಲ್ಲವೂ ದೆಹಲಿ ಮೆಟ್ರೊನಿಂದ ಸಲಹೆ ಪಡೆಯುತ್ತಿವೆ. ಆದರೆ `ನಮ್ಮ ಮೆಟ್ರೊ' ಕಾಮಗಾರಿ ಉಸ್ತುವಾರಿ ಹೊತ್ತಿರುವ ಬಿಎಂಆರ್‍ಸಿಎಲ್ ಸಲಹೆ ಸ್ವೀಕರಿಸದೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದೆ. ಮೆಜೆಸ್ಟಿಕ್‍ನಲ್ಲಿನ ಕಾಮಗಾರಿ ಬಗ್ಗೆ ಸಲಹೆ ನೀಡಿದ್ದರೂ ಕಡೆಗಣಿಸಲಾಗಿತ್ತು ಎಂದರು.

ಸರ್ಕಾರದ ಪ್ರತಿಕ್ರಿಯೆಯಿಲ್ಲ: ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರು.10 ಸಾವಿರ ಕೋಟಿ ಮೊತ್ತದಲ್ಲಿ ರೈಲ್ವೆ ನಿರ್ಮಾಣ ಸಾಧ್ಯವಿದ್ದು, ಇದಕ್ಕೆ ಸರ್ಕಾರ ರು.1 ಸಾವಿರ ಖರ್ಚು ಮಾಡಿದರೆ ಸಾಕು. ಉಳಿದ ಹಣವನ್ನು ಜೈಕಾದಂತಹ
ಸಂಸ್ಥೆಗಳಿಂದ ಹಾಗೂ ಸ್ವಲ್ಪಭಾಗವನ್ನು ಕೇಂದ್ರ ಸರ್ಕಾರದಿಂದ ಸಾಲ ಪಡೆಯಬಹುದು. ಸರ್ಕಾರ ಖಾಸಗಿ ಸಂಸ್ಥೆಗಳು ಬಂದು ಹೂಡಿಕೆ ಮಾಡಲಿ ಎಂದು ಕಾಯುವುದರಿಂದ
ಪ್ರಯೋಜನವಿಲ್ಲ. ಹೈ ಸ್ಪೀಡ್ ರೈಲು ನಿರ್ಮಾಣವಾದರೆ ಬೆಂಗಳೂರು-ಮೈಸೂರು ನಡುವೆ ಈಗಿರುವ 130 ಕಿ.ಮೀ. ಮಾರ್ಗ 100 ಕಿ.ಮೀ.ಗೆ ಇಳಿಯಲಿದೆ. ಹಾಗೆಯೇ, 45 ನಿಮಿಷಕ್ಕೆ ಸಂಚಾರದ ವೇಳೆ ಇಳಿಕೆಯಾಗಲಿದೆ. ನಿತ್ಯ ಲಕ್ಷಾಂತರ ಜನರ ಸಮಯ ಉಳಿತಾಯವಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com