
ಬೆಂಗಳೂರು: ಶನಿವಾರ ಮುಕ್ತಾಯಗೊಂಡಿರುವ ಬಿಬಿಎಂಪಿ ಚುನಾವಣೆಯ ಮತಯಂತ್ರಗಳಲ್ಲಿ (ಇವಿಎಂ) ಇರಿಸಲಾಗಿರುವ ಕೇಂದ್ರಗಳಿಗೆ ನಗರ ಪೊಲೀಸರು ಮೂರು ಸುತ್ತಿನ ಸರ್ಪಗಾವಲು ಏರ್ಪಡಿಸಿದ್ದಾರೆ. ಮಂಗಳವಾರ ಮತ ಎಣಿಕೆ ಕಾರ್ಯ ಮುಕ್ತಾಯಗೊಳ್ಳುವವರೆಗೂ ಬಿಗಿ ಭದ್ರತೆ ಮುಂದುವರೆಯಲಿದೆ.
ಕೆಂಗೇರಿಯಲ್ಲಿನ ಕೆಂಗೇರಿ ಎಜುಕೇಷನ್ ಟ್ರಸ್ಟ್, ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಮಾಕ್ಷಿಪಾಳ್ಯದ ಬಿಬಿಎಂಪಿ ಕಟ್ಟಡ, ಗಾಂಧಿನಗರದಲ್ಲಿನ ಗೃಹ ವಿಜ್ಞಾನ ಕಾಲೇಜು ಹಾಗೂ ಟಿ.ದಾಸರಹಳ್ಳಿ ಕಸ್ತೂರಿನಗರದ ಬ್ರೈಟ್ ಹೈ ಸ್ಕೂಲ್ ಸೇರಿ 25 ಕಡೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್ ಗಳಲ್ಲಿ ಇರಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.
24 ಗಂಟೆಯೂ ಗಸ್ತು: ಮತಯಂತ್ರ ಇರಿಸಿರುವ ಕೇಂದ್ರಗಳ ಒಳಗೆ 24 ಗಂಟೆ ಕಾಲ ಪೊಲೀಸರ ಗಸ್ತು ತಿರುಗುತ್ತಿರುತ್ತಾರೆ. ಕೊಠಡಿ ಹೊರಗೆ ಹಾಗೂ ಕಾಂಪೌಂಡ್ ನ ಆವರಣದಲ್ಲೂ ಪೊಲೀಸರ ಭದ್ರತೆಗೆ ಇರಲಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸರು ಕೇಂದ್ರಗಳ ಸುತ್ತಮುತ್ತ ಗಸ್ತು ತಿರುಗಲಿದ್ದು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಪ್ರತಿ ಸ್ಟ್ರಾಂಗ್ ರೂಮಿನ ಭದ್ರತೆಗೆ ಓರ್ವ ಎಸಿಪಿ ಉಸ್ತುವಾರಿ ವಹಿಸಲಾಗಿದ್ದು ತಲಾ 2 ಕೆಎಸ್ಆರ್ ಪಿ ಪ್ಲಟೂನ್ ಗಳನ್ನು ನಿಯೋಜಿಸಲಾಗಿದೆ.
ಮಂಗಳವಾರ ಮತಎಣಿಕೆ ಸಂದರ್ಭದಲ್ಲಿ 66 ಕೆಎಸ್ಆರ್ ಪಿ ಪ್ಲಟೂನ್ ಸೇರಿ 10 ಸಾವಿರ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ. ಇದೇ ವೇಳೆ ಮೆರವಣಿಗೆಗಳಿಗೆ ನಿಷೇಧ ಹೇರಲಾಗಿದ್ದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
Advertisement