ಬಾಲಕನ ಜೀವವನ್ನೇ ತೆಗೆದ ರಸ್ತೆ ಗುಂಡಿ

ಹೆದ್ದಾರಿಯಲ್ಲಿ ದಿಢೀರ್ ಎದುರಾದ ಗುಂಡಿಗೆ ಇಳಿಯುವುದನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನವನ್ನು ಬಲಕ್ಕೆ ತೆಗೆದುಕೊಂಡಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟು ಆತನ ತಾಯಿ ಗಾಯಗೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹೆದ್ದಾರಿಯಲ್ಲಿ ದಿಢೀರ್ ಎದುರಾದ ಗುಂಡಿಗೆ ಇಳಿಯುವುದನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನವನ್ನು ಬಲಕ್ಕೆ ತೆಗೆದುಕೊಂಡಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟು ಆತನ ತಾಯಿ ಗಾಯಗೊಂಡಿದ್ದಾರೆ.

ತುಮಕೂರು ರಸ್ತೆಯ ಎಸ್‍ಆರ್‍ಎಸ್ ಜಂಕ್ಷನ್ ಬಳಿ ಭಾನುವಾರ ಬೆಳಗ್ಗೆ ದುರ್ಘಟನೆ ಸಂಭವಿಸಿದ್ದು ಅಪಘಾತ ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ತುಮಕೂರು ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಗಾಯತ್ರಿನಗರ ನಿವಾಸಿ ಲಿಖಿತ್‍ಗೌಡ (9) ಮೃತ ಬಾಲಕನಾಗಿದ್ದು ಈತನನ್ನು ಹಿಂಬದಿ ಕೂರಿಸಿಕೊಂಡ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ತಾಯಿ ಸುನೀತಾ ಅವರಿಗೆ ಗಾಯಗಳಾಗಿವೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂಜೆಗೆ ಹೊರಟಿದ್ದರು: ಚಿಕ್ಕಬಾಣಾವರದಲ್ಲಿರುವ ಸಹೋದರನ ಮನೆಯಲ್ಲಿ ಭಾನುವಾರ ಸತ್ಯನಾರಾಯಣ ಪೂಜೆ ಇದ್ದ ಕಾರಣ ಸುನೀತಾ ಅವರು ಮಗನನ್ನು ಕರೆದುಕೊಂಡು ಬೆಳಿಗ್ಗೆ 8.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ತುಮಕೂರು ರಸ್ತೆ ಎಸ್ ಆರ್‍ಎಸ್ ಜಂಕ್ಷನ್ ಬಳಿ ಬಂದಾಗ ದಿಢೀರ್ ಎಂದು ಕಾಣಿಸಿಕೊಂಡ ಗುಂಡಿಯಲ್ಲಿ ಸ್ಕೂಟರ್ ಇಳಿಸುವುದನ್ನು ತಪ್ಪಿಸುವ ಯತ್ನದಲ್ಲಿ ಸುನೀತಾ ಅವರು ಸ್ಕೂಟರನ್ನು ಬಲಕ್ಕೆ ತೆಗೆದುಕೊಂಡರು. ಅದೇ ಸಮಯದಲ್ಲಿ ನೆಲಮಂಗಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂದೆ ಕುಳಿತಿದ್ದ ಲಿಖಿತ್, ಬಸ್‍ನ ಮುಂಭಾಗಕ್ಕೆ ಬಿದ್ದಾಗ ಆತನ ತಲೆ ಮೇಲೆ ಬಸ್‍ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುನೀತಾ ಅವರ ಬಲಗೈ ಹಾಗೂ ತಲೆಗೆ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ ಹಾಗೂ ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮನೆ ಸಮೀಪದ ಶಾಲೆಯಲ್ಲಿ ಲಿಖಿತ್ ಮೂರನೇ ತರಗತಿ ಓದುತ್ತಿದ್ದ. ಆತನ ತಂದೆ ಕುಮಾರ್ ಅವರು ಪೀಣ್ಯ ಬಳಿಯ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿದ್ದರು. ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ: ಸಾವಿರಾರು ವಾಹನಗಳ ಓಡಾಡುವ ರಸ್ತೆ ದಾಟಲು ಪಾದಚಾರಿಗಳು ಪರದಾಡುತ್ತಿದ್ದಾರೆ. ಒಂದೇ ತಿಂಗಳಲ್ಲಿ ಎಸ್‍ಆರ್‍ಎಸ್ ಜಂಕ್ಷನ್‍ನಲ್ಲಿ ಸಂಭವಿಸಿದ ಮೂರನೇ ಅಪಘಾತವಿದು. ರಸ್ತೆ ದುರಸ್ತಿ ಮಾಡಿ, ಪಾದಚಾರಿಗಳು ಓಡಾಡಲು ಸ್ಕೈವಾಕ್ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ವಾಹನ ತಡೆದು ರಸ್ತೆ ಸಂಚಾರ ಬಂದ್ ಮಾಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೀಣ್ಯ ಪೊಲೀಸರು ಪ್ರತಿಭಟನಾಕಾರರ ಸಮಾಧಾನ-ಪಡಿಸಲು ಯತ್ನಿಸಿದರು ಪ್ರಯೋಜನವಾಗಲಿಲ್ಲ. ಹತ್ತಿರದಲ್ಲೇ ಸಂಚರಿಸುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಕರೆಸಿ ರಸ್ತೆ ಗುಂಡಿಗೆ ಸಿಮೆಂಟ್‍ನ್ನು ತುಂಬಿಸಲಾಯಿತು. ಪೊಲೀಸರ ಮನವೊಲಿಕೆಗೆ ಮಣಿದ ಪ್ರತಿಭಟನಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com