ಬಿಬಿಎಂಪಿ ಚುನಾವಣೆ: ಶೇ.49 ಪಾಸ್, ಬಾಕಿ ಫೇಲ್

ಬಿಬಿಎಂಪಿ ಚುನಾವಣೆಯ ಮತದಾನ ಪ್ರಮಾಣದ ಅಂತಿಮ ವಿವರ ಹೊರಬಂದಿದ್ದು, ನಗರದಲ್ಲಿ ಶೇ.49.31ರಷ್ಟು ಮತದಾನವಾಗಿದೆ. ಇದು ಕಳೆದ ಬಾರಿಗಿಂತ ಶೇ.5.27ರಷ್ಟು ಮಾತ್ರ ಹೆಚ್ಚಳ ಎಂಬುದು ಚುನಾವಣಾ ಆಯೋಗದ ಬೇಸರ...
ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ (ಸಂಗ್ರಹ ಚಿತ್ರ)
ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಮತದಾನ ಪ್ರಮಾಣದ ಅಂತಿಮ ವಿವರ ಹೊರಬಂದಿದ್ದು, ನಗರದಲ್ಲಿ ಶೇ.49.31ರಷ್ಟು ಮತದಾನವಾಗಿದೆ. ಇದು ಕಳೆದ ಬಾರಿಗಿಂತ ಶೇ.5.27ರಷ್ಟು ಮಾತ್ರ ಹೆಚ್ಚಳ ಎಂಬುದು ಚುನಾವಣಾ ಆಯೋಗದ ಬೇಸರ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ, 2010ರ ಚುನಾವಣೆಯಲ್ಲಿ ಶೇ.44.04 ಹಾಗೂ 2001ರಲ್ಲಿ 44.32ರಷ್ಟು ಮತದಾನವಾಗಿತ್ತು. ಈ ಬಾರಿ 197 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಚಿಕ್ಕಪೇಟಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸಿದ್ದಾಪುರ ವಾರ್ಡ್ ನಲ್ಲಿ ಶೇ.62.14 ಅತಿ ಹೆಚ್ಚು ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ ನಲ್ಲಿ ಶೇ.37.83 ರ ಪ್ರಮಾಣದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಈ ಮೂಲಕ ಚುನಾವಣಾ ಆಯೋಗದ ಶೇ.60ರ ಪ್ರಮಾಣದ ಮತದಾನದ ನಿರೀಕ್ಷೆ ಹುಸಿಯಾಗಿದೆ ಎಂದರು.

ಪ್ರಮಾಣ ಕಡಿಮೆಯಾದರೂ ಪ್ರಕ್ರಿಯೆ ಶಾಂತ: ಕೆಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು, ನಕಲಿ ಮತದಾರರಿಂದ ಗೊಂದಲದಂತಹ ಪ್ರಕರಣ ಬಿಟ್ಟರೆ, ಮತದಾನ ಪ್ರಕ್ರಿಯೆಗೆ ತೊಂದರೆಯಾಗುವ ಯಾವುದೇ ಘಟನೆಗಳು ನಡೆದಿಲ್ಲ. ಹೀಗಾಗಿ ಎಲ್ಲಿಯೂ ಮರುಮತದಾನದ ಅಗತ್ಯ ಉಂಟಾಗಿಲ್ಲ ಎಂದರು.

ಕಳೆದ ಬಿಬಿಎಂಪಿ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಪ್ರಮಾಣ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಆದರೂ ಆಯೋಗ ನಿರೀಕ್ಷಿಸಿದ ಪ್ರಮಾಣದಲ್ಲಿ ಮತದಾನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿ.ಕುಮಾರ್ ನಾಯಕ್ ಮಾತನಾಡಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ, ಇದು ಮತದಾರರ ಮೇಲೆ ಪರಿಣಾಮ ಬೀರಿಲ್ಲ. ಆಯೋಗದ ನಿರೀಕ್ಷೆಯಂತೆ ಮತದಾನ ನಡೆದಿಲ್ಲ. ಶೇ.49ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕಿತ್ತು ಎಂದರು.

27ಕೇಂದ್ರಗಳಲ್ಲಿ ಮತ ಎಣಿಕೆ
`ವಿಧಾನಸಭಾ ಕ್ಷೇತ್ರವಾರು 27 ಮತ ಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ಬೆ. 8ಕ್ಕೆ ಎಣಿಕೆ ಕಾರ್ಯ ಆರಂಭವಾಗಲಿದೆ. ಎಣಿಕೆ ಕೇಂದ್ರದಲ್ಲಿ ಗರಿಷ್ಠ 14 ಟೇಬಲ್‍ಗಳಿಗೆ ಮಾತ್ರ ಅವಕಾಶವಿದೆ.  ಮೊದಲಿಗೆ ಅಂಚೆ ಮತ ಎಣಿಕೆ ಕಾರ್ಯ ಪೂರ್ಣಗೊಳಿಸಿ, ನಂತರ ಯಂತ್ರಗಳಲ್ಲಿನ ಮತ ಎಣಿಸಲಾಗುತ್ತದೆ. ಆದರೆ ಮರು ಮತದಾನ ಎಲ್ಲಿಯೂ ಇಲ್ಲ' ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಕುಮಾರ್ ನಾಯಕ್ ತಿಳಿಸಿದರು. 304 ಚುನಾವಣಾಧಿಕಾರಿ, ಹೆಚ್ಚುವರಿ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಇಕಾರಿ, 3,180 ಮತ ಎಣಿಕೆ ಸಿಬ್ಬಂದಿ ಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯವರೆಗೆ ಬೆ. 6ರಿಂದ ರಾತ್ರಿ 8ರವರೆಗೆ ಮದ್ಯಪಾನ ನಿಷೇಧ ಪ್ರದೇಶ ಎಂದು ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com