
ಬೆಂಗಳೂರು: ಕೃಷಿ, ಕೈಗಾರಿಕೆ ಹಾಗೂ ಮನೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸುವ ಯೋಜನೆಗಳಿಗೆ ಕೇಂದ್ರ ಸರ್ಕಾರ ರು.2500 ಕೋಟಿ ಹಣ ನೀಡಲಿದೆ ಎಂದು ಕೇಂದ್ರದ ಇಂಧನ, ಕಲ್ಲಿದ್ದಲು ಹಾಗೂ ನವೀಕರಿಸಬಹುದಾದ ಇಂಧನಗಳ ರಾಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ರಾಜ್ಯದ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ 8 ಲಕ್ಷ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ದೀನ್‍ದಯಾಳ್ ಗ್ರಾಮಜ್ಯೋತಿ ಯೋಜನೆಯಡಿ ಇನ್ನೆರಡು ವರ್ಷದಲ್ಲಿ ವಿದ್ಯುತ್ ನೀಡಲಾಗುವುದು. ಗುಣಮಟ್ಟದ ಕೃಷಿಗೆ 24 ಗಂಟೆ ವಿದ್ಯುತ್ ಅಗತ್ಯವಿದ್ದರಿಂದ ಪಂಪ್‍ಸೆಟ್‍ಗಳಿಗೆ ಪ್ರತ್ಯೇಕ ಫ್ರೀಡರ್ ಲೈನ್‍ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ಕೇಂದ್ರ ರು.800 ಕೋಟಿ ಒದಗಿಸಲಿದೆ. ಜತೆಗೆ, ರಾಜ್ಯದ ಕೈಗಾರಿಕೆಗಳು ಸೇರಿ ಎಲ್ಲರಿಗೂ 24 ಗಂಟೆ ವಿದ್ಯುತ್ ಒದಗಿಸಲು ಉನ್ನತೀಕರಣ, ಫ್ರೀಡರ್‍ಲೈನ್ ಸೇರಿದಂತೆ ಎಲ್ಲ ಯೋಜನೆಗಳಿಗೆ ರು.1700 ಕೋಟಿ ನೀಡಲಿದೆ ಎಂದು ವಿವರಿಸಿದರು.
ದೇಶದಲ್ಲಿ ವಿದ್ಯುತ್ ಹೆಚ್ಚುವರಿಯಾಗಿದ್ದರೂ ಅದನ್ನು ಬಳಸಿಕೊಳ್ಳಲು ಕರ್ನಾಟಕದಲ್ಲಿ ಟ್ರಾನ್ಸ್‍ಮಿಷನ್ ವ್ಯವಸ್ಥೆ ಇಲ್ಲ. ಇದನ್ನು ನಿರ್ಮಿಸಲು ಮೂರ್ನಾಲ್ಕು ವರ್ಷಗಳು ಬೇಕು
ಎಂದು ಪಿಯೂಶ್ ಗೋಯಲ್ ಹೇಳಿದರು. ಸೋಲಾರ್ ವಿದ್ಯುತ್ ವಿದ್ಯುತ್ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಇದೆ. ಕರ್ನಾಟಕ ತನ್ನ ಯೋಜನೆಗಳನ್ನು
ಉತ್ತಮವಾಗಿ ನಿರ್ವಹಿಸಿ ಕೇಂದ್ರದೊಂದಿಗೆ ಸಹಕರಿಸುತ್ತಿದೆ. ಕರ್ನಾಟಕದ ವಿದ್ಯುತ್ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಶ್
ಗೋಯಲ್ ಹೇಳಿದರು. ತುಮಕೂರಿನ ಪಾವಗಡದಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ 2000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆ ಅನುಷ್ಠಾನ ಪ್ರಕ್ರಿಯೆ ಶೀಘ್ರವೇ ಆರಂಭವಾಗುತ್ತದೆ ಎಂದರು.
Advertisement