ಬಿಬಿಎಂಪಿ: ಜೆಡಿಎಸ್ ಸುತ್ತ ಬಿಜೆಪಿ ಗಿರಕಿ

ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಬಂದ ಪಕ್ಷೇತರರನ್ನು ಕಡೆಗಣೆಸಿ ಕೈಕೈ ಹಿಸುಕಿಕೊಳ್ಳುತ್ತಿ ರುವ ಬಿಜೆಪಿ ನಾಯಕರೀಗ ತಮ್ಮ ಎರಡನೇ ಅವಕಾಶವೆಂಬಂತೆ ಜೆಡಿಎಸ್ ಸುತ್ತ ಗಿರಕಿ ಹೊಡೆಯಲು ಆರಂಭಿಸಿದ್ದಾರೆ...
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಬಂದ ಪಕ್ಷೇತರರನ್ನು ಕಡೆಗಣೆಸಿ ಕೈಕೈ ಹಿಸುಕಿಕೊಳ್ಳುತ್ತಿ ರುವ ಬಿಜೆಪಿ ನಾಯಕರೀಗ ತಮ್ಮ ಎರಡನೇ ಅವಕಾಶವೆಂಬಂತೆ
ಜೆಡಿಎಸ್ ಸುತ್ತ ಗಿರಕಿ ಹೊಡೆಯಲು ಆರಂಭಿಸಿದ್ದಾರೆ.

ಇದರ ಒಂದು ಭಾಗವಾಗಿ ಶನಿವಾರ ಕೇಂದ್ರ ಸಚಿವ ಸದಾನಂದ ಗೌಡ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿಯವರು ಎಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಇತ್ತ ಆರ್. ಅಶೋಕ್ ಅವರು ಚಿಕ್ಕಮಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಪಾಲಿಕೆಯಲ್ಲಿ ಮೇಯರ್ ಪದವಿ ಪಡೆಯಲು ಬಿಜೆಪಿಗೆ ಜೆಡಿಎಸ್ ಸಹಕಾರ ಬೇಕೆಂದು ದೇವೇಗೌಡರ ಮುಂದೆ ಸದಾನಂದ ಗೌಡರು ಮೈತ್ರಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ದೇವೇಗೌಡರು ಮಾತ್ರ ಈ ಪ್ರಸ್ತಾಪಕ್ಕೆ ಯಾವುದೇ ಮನ್ನಣೆ ನೀಡುವ ಮಾತನ್ನಾಡಿಲ್ಲ. ನೋಡೋಣ, ಚರ್ಚೆ ಮಾಡುತ್ತೇನೆ. ಸೆಪ್ಟೆಂಬರ್ 2ರ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸಭೆ:
ಜೆಡಿಎಸ್ ಜೊತೆ ಸೇರಿ ಬಿಬಿಎಂಪಿ ಅಧಿಕಾರ ಹಂಚಿಕೆ ಮಾಡುವ ವಿಚಾರವಾಗಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಸುದೀರ್ಘ ಚರ್ಚೆ
ನಡೆಸಿದರು. ಜೆಡಿಎಸ್ ಮನವೊಲಿಸಲು ಏನೆಲ್ಲಾ ಪ್ರಯತ್ನಗಳಾಗಬೇಕು ಎಂಬ ಬಗ್ಗೆ ಸಲಹೆಗಳು ಕ್ರೋಡೀಕರಣವಾದವು.

ಇದೇ ವೇಳೆ ಸದಾನಂದಗೌಡರು ದೇವೇಗೌಡರೊಂದಿಗೆ ನಡೆಸಿದ ಚರ್ಚೆಯ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಇದೇ ವೇಳೆ ಪಕ್ಷೇತರ ಸದಸ್ಯರ ಬೆಂಬಲ ಗಳಿಸುವ ವಿಚಾರವಾಗಿಯೂ ನಡೆಸಬೇಕಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇನ್ನೊಂದು ಕಡೆ ಆರ್. ಅಶೋಕ್ ಅವರು ಶುಕ್ರವಾರ ರಾತ್ರಿಯೇ ಪಕ್ಷೇತ್ರ ಅಭ್ಯರ್ಥಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆ ಅಭ್ಯರ್ಥಿ ಮಾತ್ರ ತನ್ನ ನಿಲುವನ್ನು ನಂತರ ತಿಳಿಸುವುದಾಗಿ ಅಶೋಕ್ ಅವರನ್ನು ಸಾಗಿಹಾಕಿದ್ದಾರೆ.

ಅಸಮಾಧಾನ ಸ್ಪೋಟ:
ಬದಲಾದ ರಾಜಕೀಯ ಬೆಳವಣಿಗೆಯಿಂದ ಕಂಗೆಟ್ಟಿರುವ ಬಿಜೆಪಿಯು ಕಾಂಗ್ರೆಸ್ ವಿರುದ್ಧ ತನ್ನ ವಾಗ್ದಾಳಿ ಮುಂದುವರೆಸಿದೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಬಿಜೆಪಿಗೆ ಬಿಬಿಎಂಪಿ ಅಧಿಕಾರವನ್ನು ತಪ್ಪಿಸಲು ಕಾಂಗ್ರೆಸ್ ಮೈತ್ರಿ ಹೆಸರಿನಲ್ಲಿ ರಣತಂತ್ರ ರೂಪಿಸುತ್ತಿದೆ. ಅದಕ್ಕೆ ಪ್ರತಿತಂತ್ರ ರೂಪಿಸುವ ಶಕ್ತಿ ನಮಗೂ ಇದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ನಮ್ಮನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿಯೇ ಇನ್ನೂ ಪಾಲಿಕೆಗೆ ಮೇಯರ್, ಉಪಮೇಯರ್ ಆಯ್ಕೆಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ ಎಂದು ದೂರಿದರಲ್ಲದೇ, ಜೆಡಿಎಸ್ ಜೊತೆ ಸೇರಿಕೊಂಡು ಮೈತ್ರಿಕೂಟ ರಚಿಸಿ ಪಾಲಿಕೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ವ್ಯವಹಾರ ನಡೆಸುತ್ತಿದೆ ಎಂದರು.

ಪಕ್ಷೇತರ ಸದಸ್ಯರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಪಾಲಿಕೆ ಚುಕ್ಕಾಣಿ ಹಿಡಿಯುವುದು ನೂರಕ್ಕೆ ನೂರು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಆರ್.ಅಶೋಕ್, ನಾವು ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದೇವೆ. ಆದರೂ ರೆಸಾಟ್ರ್ ಗಳಲ್ಲಿ ಯಾಕೆ ಸಭೆ ನಡೆಸುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಸಾಧ್ಯವಿಲ್ಲ. ಮೈತ್ರಿಕೂಟವೇ ಪಾಲಿಕೆ ಚುಕ್ಕಾಣಿ ಹಿಡಿಯಬೇಕು ಎಂದಾದರೆ ಅದು ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com