ಬೆಂಗಳೂರು: ಮುಂಬರುವ 2016ರ ಮಾರ್ಚ್ ವೇಳೆಗೆ `ನಮ್ಮ ಮೆಟ್ರೊ'ದ ಮೊದಲ ಹಂತ ಪೂರ್ಣಗೊಳ್ಳಲಿದ್ದು, ಜನ ಸಂಚಾರಕ್ಕೆ ಮುಕ್ತವಾಗಲಿದೆ. ಈ ನಡುವೆ ನಗರದ ವಿವಿಧ ಭಾಗಗಳಲ್ಲಿ `ಸುರಂಗ' ಕೊರೆಯುವ ಕೆಲಸ ನಿರ್ವಹಿ ಸುತ್ತಿರುವ `ಟನಲ್ ಬೋರಿಂಗ್ ಮಷಿನ್' (ಟಿಬಿಎಂ)ಗಳು ಸಹ ಫೆಬ್ರುವರಿ ಅಂತ್ಯಕ್ಕೆ ಸುರಂಗ ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಲಿವೆ.
ಒಟ್ಟಾರೆ ನಾಲ್ಕು ಸುರಂಗ ಕೊರೆಯುವುದು ಸೇರಿದಂತೆ ನಮ್ಮ ಮೆಟ್ರೊದ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಲಿದೆ. ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍ಸಿ) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲಾ ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲೆಲ್ಲಿ ಕಾಮಗಾರಿ ಮುಕ್ತಾಯವಾಗಿದೆ ಅಲ್ಲಿ ಪ್ರಾಯೋಗಿಕವಾಗಿ ರೈಲುಗಳನ್ನು ಓಡಿಸುವ ಕೆಲಸ ನಡೆಯುತ್ತಿದೆ ಎಂದರು.
ಯಶಸ್ವಿಯಾಗಿ ಹೊರಬಂದ ಟಿಬಿಎಂ: ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಕೊರೆ ಯುತ್ತಿದ್ದ ಸುರಂಗ ಮಾರ್ಗ ಚಿಕ್ಕ ಪೇಟೆವರೆಗೆ ಸಾಗಿದೆ. ಸೋಮವಾರ ಚಿಕ್ಕಪೇಟೆ ಬಳಿ `ಕೃಷ್ಣ' (ಸುರಂಗ ಮಾರ್ಗದ ಹೆಸರು) ಟಿಬಿಎಂ ಯಶಸ್ವಿಯಾಗಿ ಹೊರಬಂದಿತು. ಇದು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು. ಕಳೆದ 19 ತಿಂಗಳಿಂದ ನಿರಂತರ ಕಾಮಗಾರಿಯ ಬಳಿಕ 435 ಮೀ. ಉದ್ದದ ಸುರಂಗ ಮಾರ್ಗ ಚಿಕ್ಕಪೇಟೆವರೆಗೆ ಯಶಸ್ವಿಯಾಗಿ ಸಾಗಿದೆ. ಯಂತ್ರಹೊರಬಂದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಈ ಸುರಂಗಮಾರ್ಗಗಳ ಬಗ್ಗೆ ಪ್ರತಿಕ್ರಿಯಿಸಿದ ಕರೋಲಾ, ಈ ಯಂತ್ರ `ಕೃಷ್ಣ' ಒಂದೂವರೆ ತಿಂಗಳ ನಂತರ ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಕಡೆಗೆ ಸಾಗಲಿದೆ. ಕೃಷ್ಣ ಮತ್ತು ಕಾವೇರಿ ಮೆಷಿನ್ ಗಳು ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಗೆ ಸಾಗಬೇಕಿದೆ ಎಂದರು.
Advertisement