
ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಇತರ ಸಚಿವರಿಗಿಂತ ಸ್ವಲ್ಪ ಡಿಫರೆಂಟ್. ಅವರ ಹಾವ ಭಾವ, ವಿವಾದಾತ್ಮಕ ಹೇಳಿಕೆ, ಟೀಕೆಗಳಿಗೆ ಉತ್ತರಿಸುವ ಧಾಟಿ ಎಲ್ಲವೂ ಭಿನ್ನವೇ. ಇದೀಗ ಭಿನ್ನರಾಗಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಆಂಜನೇಯ ಶುಕ್ರವಾರದ ಪೂಜೆಯನ್ನು ತಮ್ಮ ಕಚೇರಿಯಿಂದ ಹೊರಗಟ್ಟಿದ್ದಾರೆ.
ಸಾಮಾನ್ಯವಾಗಿ ವಿಧಾನಸೌಧದಲ್ಲಿ ಪೂಜೆ ಪುನಸ್ಕಾರಗಳು ಬಲು ಜೋರು. ಮಂತ್ರಿಗಳು ತಮ್ಮ ಮೊದಲ ದಿನದ ಕಚೇರಿ ಪ್ರವೇಶದಂದು ಕುರ್ಚಿಗಳಿಗೂ ಪೂಜೆ ಮಾಡುತ್ತಾರೆ, ಅಷ್ಟು ಭಕ್ತಿ!
ಇನ್ನು ಅನೇಕ ಕಚೇರಿಗಳಲ್ಲಿ ಮಿನಿ ದೇವಸ್ಥಾನವೇ ಸೃಷ್ಟಿಯಾಗಿವೆ. ಪ್ರತಿ ದಿನ ಪೂಜೆಯೂ ಗಡದ್ದಾಗಿಯೇ ನಡೆದಿರುತ್ತದೆ. ಶುಕ್ರವಾರವಂತೂ ಪೂಜೆಯ ಧಾವಂತ ಅಷ್ಟಿಷ್ಟಲ್ಲ. ಶಕ್ತಿ ಸೌಧದಲ್ಲಿ ಗಂಟೆ ಸದ್ದು ಜೋರಾಗಿಯೇ ಕೇಳಿಸುತ್ತದೆ. ಬಹುತೇಕ ಸಿಬ್ಬಂದಿಯಲ್ಲಿ ಕೆಲಸದ ಉತ್ಸಾಹಕ್ಕಿಂತ ಪೂಜೆ ಮಾಡುವ ಉತ್ಸಾಹವೇ ಜೋರಾಗಿರುತ್ತದೆ ಪ್ರತಿ ಶುಕ್ರವಾರ ವಿಧಾನಸೌಧದ ಪೂಜೆಯ ಕಾರ್ಯವು ಅಲಿಖಿತ ಸಂಪ್ರದಾಯವಾಗಿ ಅನೇಕ ವರ್ಷಗಳಿಂದಲೂ ನಡೆದುಬಂದಿದೆ.
ಇದೀಗ ಸಚಿವ ಆಂಜನೇಯ ಅವರು ಹೊಸ ಹಾದಿ ತುಳಿದಿದ್ದಾರೆ. ತಮ್ಮ ಕಚೇರಿಯಲ್ಲಿ ಪೂಜೆ ಮಾಡೋ ಹಾಗಿಲ್ಲ ಎಂದು ಫರ್ಮಾನು ಹೊರಡಿಸಿದ್ದಾರೆ. ಪೂಜೆಗೀಜೆ ಮನೆಯಲ್ಲೇ ಮಾಡಿಕೊಂಡು ಬನ್ನಿ. ಕಚೇರಿಯಲ್ಲಿ ಅಂತದ್ದೆಲ್ಲಾ ಮಾಡೋ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಈ ಬಗ್ಗೆ ಅನೌಪಚಾಕವಾಗಿ ಮಾತನಾಡಿದ ಆಂಜನೇಯ, ನನ್ನ ಕಚೇರಿಯಲ್ಲಿ ಶುಕ್ರವಾರದ ವಿಶೇಷ ಪೂಜೆಯೂ ಇಲ್ಲ, ನಿತ್ಯ ಪೂಜೆಯೂ ಇಲ್ಲ, ಗಂಟೆ ಶಬ್ದ ನನ್ನ ಕಿವಿಗೆ ಕೇಳಂಗಿಲ್ಲ ಅಷ್ಟೆ ಎಂದು ಸಿಬ್ಬಂದಿಗೆ ಹೇಳಿದ್ದೇನೆ, ಬೇಕಿದ್ರೆ ಕಚೇರಿ ನೋಡಿಕೊಳ್ಳಿ, ಒಂದೇ ಒಂದು ದೇವರ ಫೋಟೋವನ್ನೂ ಇಟ್ಟಿಲ್ಲ ಎಂದರು.
ಪೂಜೆಗಳೆಲ್ಲಾ ಅವರವರ ನಂಬಿಕೆ. ಅದು ಮನೆಯಲ್ಲೇ ಇರಬೇಕು. ಇದು ಕೆಲಸ ಮಾಡುವ ಸ್ಥಳ, ಇಲ್ಲಿ ಪೂಜೆಯ ಅಗತ್ಯವಿಲ್ಲ ಎಂಬುದು ನನ್ನ ನಂಬಿಕೆ. ಶ್ರದ್ಧೆಯಿಂದ ಕೆಲಸ ಮಾಡುವುದೇ ಪೂಜೆ ಎಂಬು ಭಾವಿಸುತ್ತೇನೆ ಎಂದು ತಮ್ಮ ನಿಲುವನ್ನು ವಿಶೇಷ ರೀತಿಯಲ್ಲಿ ಸಮರ್ಥಿಸಿಕೊಂಡರು.
Advertisement