ಕಸ ಮುಕ್ತಿಗೆ ಸಿಗದ ಪರಿಹಾರ ಶಾಸಕರ ಹೆಗಲಿಗೆ ಇದರ ಭಾರ

ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಸುವುದಕ್ಕೆ ತನ್ನಲ್ಲಿ ಸ್ಪಷ್ಟ ಯೋಜನೆ ಇಲ್ಲದೇ ತಡಬಡಾಯಿಸುತ್ತಿರುವ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಸುವುದಕ್ಕೆ ತನ್ನಲ್ಲಿ ಸ್ಪಷ್ಟ ಯೋಜನೆ  ಇಲ್ಲದೇ ತಡಬಡಾಯಿಸುತ್ತಿರುವ ಸರ್ಕಾರ ಶಾಸಕರ ಮುಂದೆ ಮಂಡಿಯೂರಿದ ಪ್ರಸಂಗ  ವಿಧಾನಸೌಧದಲ್ಲಿ ನಡೆಯಿತು.

ಬೆಂಗಳೂರು ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರದ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಜರಿದ್ದ ಸಭೆಯಲ್ಲಿ ಸರ್ಕಾರದ ಪರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭಾಗವಹಿಸಿದ್ದರು. ನಗರದ ತುಂಬ ಬಿದ್ದಿರುವ ಕಸದ ಸಮಸ್ಯೆ ಯಾವಾಗ ಪರಿಹಾರ  ಮಾಡುತ್ತೀರಾ ಎಂಬ ಪ್ರಶ್ನೆಗೆ ಸಚಿವರು ಮತ್ತು ಸಭೆಯಲ್ಲಿದ್ದ ಅಧಿಕಾರಗಳತ್ತ ತೂರಿಬಂತು.  ಕ್ಷೇತ್ರಗಳಲ್ಲಿ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ, ಕಸದ ಸಮಸ್ಯೆಗೆ   ಪರಿಹಾರವೇನಿದೆ ಎಂಬುದೇ ಬಹುತೇಕ ಎಲ್ಲ ಶಾಸಕರ ಪ್ರಶ್ನೆಯಾಗಿತ್ತು.

ಸರ್ಕಾರದಿಂದ ಮಾತ್ರ ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ. ಒಂದು ಹಂತದಲ್ಲಿ  ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಬೇಕೆಂದರೆ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕಸ ಸುರಿಯಲು ಜಾಗ ಹುಡುಕಿ ಎಂಬ ಸಲಹೆ ಸರ್ಕಾರದ ಕಡೆಯಿಂದ ಬಂದಿದೆ. ಕ್ವಾರಿಯಂತಹ ಪ್ರದೇಶವನ್ನು  ಗುರುತಿಸಿದರೆ ಅಲ್ಲಿಗೆ ಕಸವನ್ನು ಸುರಿಯುವುದು, ನಂತರ ಅದರ ಮೇಲೆ ಮಣ್ಣು ಸುರಿದು  ಗಾರ್ಡನ್ ಮಾಡಬಹುದೆಂದು  ಸಚಿವರು ಶಾಸಕರಿಗೆ ಸಲಹೆ ನೀಡಿದರು.

ಆದರೆ, ಈ ಸಲಹೆ ಬಗ್ಗೆಯೂ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದು  ತಾತ್ಕಾಲಿಕ  ಪರಿಹಾರವಷ್ಟೆ, ದೂರದೃಷ್ಟಿಯ ಆಲೋಚನೆ ಏನಿದೆ ಎಂದು ಶಾಸಕರು ಪ್ರಶ್ನೆಗೂ ಸಚಿವರು  ಉತ್ತರ ನೀಡಲಿಲ್ಲ.

ರಸ್ತೆ ಇಕ್ಕೆಲಗಳಲ್ಲಿ, ಫ್ಲೈ ಓವರ್ ಗಳ ಕೆಳಗೆ  ಎಲ್ಲೆಲ್ಲೂ ಕಸದ ರಾಶಿ ಕಾಣುತ್ತಿದೆ. ಅಂದಾಜು 20  ಸಾವಿರ ಟನ್ ಕಸ ಇರಬಹುದು, ಇದನ್ನು ಮೊದಲು ಎಲ್ಲಿಗೆ ಸಾಗಿಸುತ್ತೀರಾ ಎಂದು ಹೇಳಿಬಿಡಿ  ಎಂದು ಶಾಸಕರೊಬ್ಬರು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು.

ಇದೇ ವೇಳೆ ಕಸ ವರ್ಗೀಕರಣ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಪೌರ ಕಾರ್ಮಿಕರಿಂದಲೇ ಕಸ ವರ್ಗೀಕರಣ ಮಾಡಿಸುವುದು ಅಕ್ಷಮ್ಯವಾಗುತ್ತದೆ ಎಂದು ಆಕ್ಷೇಪವೆತ್ತಿದರು. ಕಸದ ವರ್ಗೀಕರಣ  ಕುರಿತಂತೆ ಜಾಗೃತಿ ಕಾರ್ಯಕ್ರಮ ಮಾಡೋಣ, ಆ  ಮೂಲಕ ಮುಂದಿನ 6 ತಿಂಗಳೊಳಗೆ ಕಸ ವರ್ಗೀಕರಣ ವ್ಯವಸ್ಥೆ ಸುಗಮವಾಗಿ ಆಗುವಂತೆ ಮಾಡೋಣ ಎಂಬ ಉತ್ತರ ಸರ್ಕಾರದ ಕಡೆಯಿಂದ ಬಂತು. ಈ ವೇಳೆ ಆಕ್ಷೇಪ ಎತ್ತಿದ ಶಾಸಕರು ಒಂದು ಗಡುವು ವಿಧಿಸಿಕೊಳ್ಳದೇ ಹೋದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಪೌರ ಕಾರ್ಮಿಕರಿಂದ ಕಸ ವರ್ಗೀಕರಣ ಸರಿಯಲ್ಲ  ಎಂದು ಅಭಿಪ್ರಾಯಪಟ್ಟರು. 

ಪ್ರತಿ ವಾರ್ಡಿಗೂ ಕಸ ನಿರ್ವಹಣೆಗೆಂದೇ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು. ಇಲ್ಲವಾದರೆ ಎಂಜಿನಿಯರ್ ಅವರು ಎಲ್ಲಾ ಕೆಲಸಗಳನ್ನು ಮಾಡಲಾಗುವುದಿಲ್ಲ ಎಂಬ ಸಲಹೆಯೂ ಕೇಳಿಬಂತು. ಇನ್ನು ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಸಚಿವ ಜಾರ್ಜ್  ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ರಸ್ತೆಗಳಲ್ಲಿ ಬಿದ್ದಿರುವ ಅಪಾರ ಪ್ರಮಾಣದ   ಗುಂಡಿಗಳನ್ನು ಮುಚ್ಚದೇ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರ ಉದಾಸೀನ  ಮಾಡುತ್ತಿದೆ ಎಂದು  ಟೀಕಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ ಇದ್ದ ಸರ್ಕಾರ ಏನೂ ಮಾಡಲಿಲ್ಲ.  ಈಗ ಮಳೆ ಬರುತ್ತಿದೆ ಎಂದು ಉತ್ತರಿಸಿದರು. ಇದರಿಂದ ಬಿಜೆಪಿ ಶಾಸಕರು ಕೆರಳಿದರು.  ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಬಿಬಿಎಂಪಿಯಿಂದ  ಕ್ಷೇತ್ರಗಳ ಅನುದಾನ ಬಿಡುಗಡೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆಕ್ಷೇಪ  ವ್ಯಕ್ತಪಡಿಸಿ ಸರ್ಕಾರವನ್ನು ಮುಜುಗರಕ್ಕೆ ತಳ್ಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com