ಹಸಿರು ಪೀಠದ ಮುಂದೆ ಅಹವಾಲು ಸಲ್ಲಿಕೆಗೆ ಸಲಹೆ

ಎತ್ತಿನಹೊಳೆ ಯೋಜನೆ ಜಾರಿ ಸಂಬಂಧ ಚೆನ್ನೈನ ಹಸಿರು ಪೀಠದ ಮುಂದೆ ಸಲ್ಲಿಸಬೇಕಾದ ಅಹವಾಲು ಕುರಿತು ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆಯಿತು...
ಸಿಎಂ ಅಧ್ಯಕ್ಷತೆಯ ಸರ್ವಪಕ್ಷ ಸಭೆಯಲ್ಲಿ ನಾಯಕರು (ಫೋಟೋ ಕೃಪೆ: ಕೆಪಿಎನ್)
ಸಿಎಂ ಅಧ್ಯಕ್ಷತೆಯ ಸರ್ವಪಕ್ಷ ಸಭೆಯಲ್ಲಿ ನಾಯಕರು (ಫೋಟೋ ಕೃಪೆ: ಕೆಪಿಎನ್)

ಬೆಂಗಳೂರು: ಎತ್ತಿನಹೊಳೆ ಯೋಜನೆ ಜಾರಿ ಸಂಬಂಧ ಚೆನ್ನೈನ ಹಸಿರು ಪೀಠದ ಮುಂದೆ ಸಲ್ಲಿಸಬೇಕಾದ ಅಹವಾಲು ಕುರಿತು ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ
ಸರ್ವಪಕ್ಷ ಸಭೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷಯಲ್ಲಿ ನಡೆದ ಈ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಐಟಿ ಬಿಟಿ ಸಚಿವ ಎಸ್.ಆರ್. ಪಾಟೀಲ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ ಆರ್. ಅಶೋಕ್, ಜೆಡಿಎಸ್ ಶಾಸಕರಾದ ಬಸವರಾಜ ಹೊರಟ್ಟಿ, ಚೌಡರೆಡ್ಡಿ ಭಾಗವಹಿಸಿದ್ದರು.

ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರು ಪೀಠ ಡಿಸೆಂಬರ್ 7 ರವರೆಗೆ ತಡೆ ಆದೇಶ ನೀಡಿದೆ. ಅದುವರೆಗೂ ಕಾಮಗಾರಿ ನಡೆಸುವುದಿಲ್ಲ ಎಂದು ಕೋರ್ಟ್ ಹೇಳಿರುವುದರಿಂದ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸರ್ವಪಕ್ಷ ಸದಸ್ಯರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ಈ ಮಧ್ಯೆ ಯೋಜನೆ ಸಂಬಂಧ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಡಿಸೆಂಬರ್ 18 ರಂದು ಕೋರಮಂಗಲದಲ್ಲಿ ಸಭೆ ಕರೆದಿದ್ದು, ಈ ಸಭೆಯಲ್ಲಿ ರಾಜ್ಯ ಸರ್ಕಾರ ಯಾವ ರೀತಿ ವಾದ ಮಂಡಿಸಬೇಕೆಂಬ ವಿಚಾರದ ಬಗ್ಗೆಯೂ ಚರ್ಚಿಸಲಾಯಿತು.

ಎತ್ತಿನಹೊಳೆಗೆ ಯೋಜನೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಕಾನೂನು ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂಬುದರ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆಯಲಾಯಿತು. ಹಾಗೆಯೇ ಶೀಘ್ರವೇ ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಯ ಮುಖಂಡರ ಸಭೆ ಕರೆದು ಯೋಜನೆಯ ಸಾಧಕ ಬಾಧಕದ ಬಗ್ಗೆ ತಿಳುವಳಿಕೆ ನೀಡಿ ಸಂಧಾನ ಮಾಡಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಒಟ್ಟಾರೆ ಚರ್ಚಿತ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ತಿಳಿಸಿದರು.

ಅಭ್ಯರ್ಥಿಗಳಿಗೆ ಬರ ಬಂದಿಲ್ಲ
ಎತ್ತಿನಹೊಳೆ ಯೋಜನೆ ಕುರಿತ ಸಭೆ ಆರಂಭವಾಗುತ್ತಿದ್ದಂತೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್‍ಕುಮಾರ್ ಆಗಮಿಸಿದರು. ಸಭೆ ಮುಗಿದ ಬಳಿಕ ಹೊರ ಬಂದ ರಮೇಶ್‍ಕುಮಾರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿಯಾಗಿ ಸಭೆಯ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ ರಮೇಶ್‍ಕುಮಾರ್, ಈ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮವರಿಗೊಬ್ಬರಿಗೆ ಟಿಕೆಟ್ ಕೇಳಲು ಬಂದಿದ್ದೇನೆ. ಪಕ್ಷದವರು ಟಿಕೆಟ್ ನೀಡಿರುವ ವ್ಯಕ್ತಿಯನ್ನು ನೋಡಿದರೆ ನಮ್ಮ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗೆ ಬರ ಬಂದಿರುವಂತೆ ಕಾಣುತ್ತದೆ. ಅದನ್ನು ಸಿಎಂ ಗಮನಕ್ಕೆ ತರಲು ಬಂದೆ ಹೊರತು ಸಭೆಗಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com