ಏಕ ಸಂಸ್ಕೃತಿ ಅಸ್ತಿತ್ವಕ್ಕೆ ತರುವ ಹುನ್ನಾರ

``ಲೇಖಕರ ಹತ್ಯೆ ಪ್ರಕರಣಗಳಿಂದ ಸಾಹಿತಿಗಳು ಚಿಂತಿತರಾಗಿರುವುದು ನಿಜವಾದರೂ, ಇದಕ್ಕಿಂತ ಹೆಚ್ಚಾಗಿ ಭಾರತವನ್ನು ಏಕಸಂಸ್ಕೃತಿ, ಏಕ ಧರ್ಮದ ದೇಶವನ್ನಾಗಿ ಮಾಡುವ ಪ್ರಯತ್ನದ ಬಗ್ಗೆ ಆತಂಕಿತರಾಗಿದ್ದಾರೆ,'' ಎಂದು ಲೇಖಕಿ ಶಶಿ ದೇಶಪಾಂಡೆ...
ಲೇಖಕಿ ಶಶಿ ದೇಶಪಾಂಡೆ
ಲೇಖಕಿ ಶಶಿ ದೇಶಪಾಂಡೆ
Updated on

ಬೆಂಗಳೂರು: ``ಲೇಖಕರ ಹತ್ಯೆ ಪ್ರಕರಣಗಳಿಂದ ಸಾಹಿತಿಗಳು ಚಿಂತಿತರಾಗಿರುವುದು ನಿಜವಾದರೂ, ಇದಕ್ಕಿಂತ ಹೆಚ್ಚಾಗಿ ಭಾರತವನ್ನು ಏಕಸಂಸ್ಕೃತಿ, ಏಕ ಧರ್ಮದ ದೇಶವನ್ನಾಗಿ ಮಾಡುವ ಪ್ರಯತ್ನದ ಬಗ್ಗೆ ಆತಂಕಿತರಾಗಿದ್ದಾರೆ,'' ಎಂದು ಲೇಖಕಿ ಶಶಿ ದೇಶಪಾಂಡೆ ಅಭಿಪ್ರಾಯಪಟ್ಟರು.

ಸಾಹಿತ್ಯೋತ್ಸವ ಉದ್ಘಾಟನೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ``ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಪ್ರೇಮಿಗಳ ಮೇಲೆ ಹಲ್ಲೆ, ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ, ಪುಸ್ತಕ ಬಿಡುಗಡೆ ಮಾಡುವ ಲೇಖಕನ ಮುಖಕ್ಕೆ ಮಸಿ ಬಳಿಯುವುದು, ಮಾಂಸ ತಿಂದವರನ್ನು ಕೊಲ್ಲುವುದು ಇವೆಲ್ಲವೂ ಏಕಸಂಸ್ಕೃತಿಯನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನ,'' ಎಂದರು.

``ಅಹಿಷ್ಣುತೆಯ ಚರ್ಚೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರಶಸ್ತಿ ಹಿಂದಿರುಗಿಸುವ ಅಥವಾ ಹಿಂದಿರುಗಿಸದೇ ಇರುವುದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿವೆ.

ಲೇಖಕರ ನ್ನು ಕುರಿ ಮಂದೆಗೆ ಹೋಲಿಸಿದರು. ಹಾಗಾದರೆ ಫ್ರೆಂಚ್ ಕ್ರಾಂತಿ, ಭಾರತದ ಸ್ವಾತಂತ್ರ್ಯ ಹೋರಾಟವನ್ನೂ ಹಾಗೇ ನೋಡಬೇಕಾಗುತ್ತದೆಯೇ,'' ಎಂದು ಪ್ರಶ್ನಿಸಿದರು.
``ಸಾಹಿತಿಗಳ ಧ್ರುವೀಕರಣ ನನಗೆ ಬೇಸರ ತರಿಸಿದೆ. ಲೇಖಕ ಯಾವುದೇ ರಾಜಕೀಯ ನಿಲುವುಗಳಿಗೆ ತಕ್ಕಂತೆ ಬರೆಯುವುದಕ್ಕೆ ಸಾಧ್ಯವಿಲ್ಲ. ಸೃಜನಶೀಲ ಲೇಖಕ ಬರೆಯುತ್ತಾನೆ ಅಷ್ಟೆ, ಬರೆಯುವುದಷ್ಟೇ ಅವನ ಗುರಿ. ಆದರೆ ಸಾಹಿತಿಗಳ ಸಂವಾದ ನಡೆಯಬೇಕಾದ ಜಾಗದಲ್ಲಿ ಪರಸ್ಪರ ಮಾತಿಗೆ ಜಾಗವಿರಬೇಕು. ಆದರೆ ಒಬ್ಬರು ಇನ್ನೊಬ್ಬರನ್ನು ದೂಷಿಸುವ ವಾತಾವರಣ ನಿರ್ಮಾಣವಾಗಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

``ಪ್ರಶಸ್ತಿಯನ್ನು ಹಿಂದಿರುಗಿಸುವುದು ತ್ಯಾಗ. ಅವರ ಅಬಿsಪ್ರಾಯವನ್ನು ಗೌರವಿಸಲೇ ಬೇಕು. ರಾಜಕೀಯ ಪ್ರೇರಣೆ ಇದೆ ಎಂಬಂಥ ಹೇಳಿಕೆಗಳ ಮೂಲಕ ಪ್ರಕರಣದ ತೀವ್ರತೆಯನ್ನು ಕಡಿಮೆ
ಮಾಡುವ ಪ್ರಯತ್ನಗಳು ನಡೆದವು. ಪ್ರಶಸ್ತಿ ಹಿಂತಿರುಗಿಸಿದ್ದನ್ನು ಘರ್‍ವಾಪಸಿ ರೀತಿಯಲ್ಲಿ ಪ್ರಶಸ್ತಿ ವಾಪ್ಸಿ ಎಂದು ಕರೆದಿರುವುದು ಅಸಹ್ಯಕರ. ಧರ್ಮಕ್ಕೆ ಮರು ಮತಾಂತರ ಮಾಡುವ ಹೃದಯ ಕಲಕುವ ವಿದ್ಯಮಾನವನ್ನು ಪ್ರಶಸ್ತಿಗೆ ಹೋಲಿಸಿದ್ದು ಬೇಸರ ಉಂಟು ಮಾಡಿತು,'' ಎಂದರು.

``ಲೇಖಕರು ತಮ್ಮ ಮೇಲೆ ನಡೆಯುವ ಅನಗತ್ಯ ದಾಳಿಗಳನ್ನು ಉಪೇಕ್ಷೆ ಮಾಡುವುದನ್ನು ಕಲಿಯಬೇಕಿದೆ. ಪ್ರತಿರೋಧ ಸಾಹಿತ್ಯದ ಆತ್ಮ ಎಂಬುದನ್ನು ಮರೆಯಬಾರದು,'' ಎಂದು ನುಡಿದರು. ``ಸರ್ಕಾರವೇ ಸೃಜನಶೀಲ ಮನಸ್ಸುಗಳನ್ನು ಹತ್ತಿಕ್ಕುವುದಕ್ಕೆ ಮುಂದಾಗಿರುವುದು ದುಃಖಕರ. ಯಾವುದೇ ದೇಶ, ತನ್ನ ಲೇಖಕರನ್ನು ದ್ವೇಷದಿಂದ ನಡೆಸಿಕೊಂಡರೆ, ಅದು ಒಂದು ನಾಗರಿಕ ರಾಷ್ಟ್ರವೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ,'' ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಾಶ್ಮೀರ ದ ಲೇಖಕ ಮೊಹಮ್ಮದ್ ಜಮನ್ ಅಜುರ್ದಾ, ಕನ್ನಡ ಸಾಹಿತ್ಯದ ಜತೆಗಿನ ತಮ್ಮ ಒಡನಾಟ ಹಂಚಿಕೊಂಡರು. ``ಮೊದಲ ಬಾರಿಗೆ ಕನ್ನಡದ ಸಣ್ಣ ಕಥೆಗಳನ್ನೇ ಅನುವಾದಕ್ಕೆ ಆರಿಸಿಕೊಂಡೆ. ವಿ.ಕೃ. ಗೋಕಾಕ್, ಡಾ.ಯು.ಆರ್. ಅನಂತಮೂರ್ತಿ ನನಗೆ ಪರಿಚಿತರು. ಚಂದ್ರಶೇಖರ ಕಂಬಾರ, ಕಿಕ್ಕೇರಿ ನಾರಾ ಯಣ ನನಗೆ ಆಪ್ತರು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com