ಪ್ರತಿಭಾ ಕೊಲೆ ಆರೋಪಿಗೆ ಗಲ್ಲುಶಿಕ್ಷೆ: ಕಾಯ್ದಿಟ್ಟ ತೀರ್ಪು

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಕ್ಯಾಬ್ ಡ್ರೈವರ್ ಶಿವಕುಮಾರ್‍ಗೆ ಗಲ್ಲುಶಿಕ್ಷೆ ವಿಧಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ...
ಹೈಕೋರ್ಟ್ (ಸಂಗ್ರಹ ಚಿತ್ರ)
ಹೈಕೋರ್ಟ್ (ಸಂಗ್ರಹ ಚಿತ್ರ)

ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಕ್ಯಾಬ್ ಡ್ರೈವರ್ ಶಿವಕುಮಾರ್‍ಗೆ ಗಲ್ಲುಶಿಕ್ಷೆ ವಿಧಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಪ್ರಕರಣ ಸಂಬಂಧ ಶಿವಕುಮಾರ್‍ಗೆ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾ.ಎಚ್.ಬಿಳ್ಳಪ್ಪ ಮತ್ತು ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ ಪ್ರಕರಣದಲ್ಲಿ ತನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ತೀರ್ಪು ರದ್ದು ಕೋರಿ ಶಿವಕುಮಾರ್ ಸಹ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಯ ತೀರ್ಪನ್ನೂ ಸಹ ಪೀಠ ಕಾಯ್ದಿರಿಸಿದೆ.

ಏನಿದು ಪ್ರಕರಣ?: ನಗರದ ಎಚ್ ಪಿ. ಗ್ಲೋಬಲ್ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾ (28) ಅವರು ರಾತ್ರಿಪಾಳಿಗೆ ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕ ಶಿವಕುಮಾರ್ 2005ರಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. 2006ರಲ್ಲಿ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಸುಮಾರು ನಾಲ್ಕು ವರ್ಷಗಳ ವಿಚಾರಣೆಯ ನಂತರ 2010ರ ಅ.6ರಂದು 11ನೇ ಹೆಚ್ಚುವರಿ ತ್ವರಿತ ನ್ಯಾಯಾಲಯ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆವಿಧಿಸಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ (ಕುಮಾರಸ್ವಾಮಿ ಠಾಣೆ ಪೊಲೀಸರು) ಶಿವಕುಮಾರ್ ಅವರು ಪ್ರತಿಭಾ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ. ಇದೊಂದು ಅತ್ಯಂತ ಹೀನ ಕೃತ್ಯ ಹಾಗೂ ಅಪರೂಪದ ಪ್ರಕರಣದ ಸಾಲಿಗೆ ಸೇರಲಿದೆ. ಹೀಗಾಗಿ ಗಲ್ಲು ಶಿಕ್ಷೆಯಂತಹ ಗರಿಷ್ಠ ಶಿಕ್ಷೆಯನ್ನು ಶಿವಕುಮಾರ್‍ಗೆ ವಿಧಿಸಬೇಕು ಎಂದು ಕೋರಿದ್ದರು. ಇನ್ನೊಂದೆಡೆ ಜೀವಾವಧಿ ಶಿಕ್ಷೆ ಪ್ರಶ್ನಿಸಿದ್ದ ಶಿವಕುಮಾರ್ ಪ್ರಕರಣದಲ್ಲಿ ತಾನು ನಿರಪರಾಧಿಯಾಗಿದ್ದು, ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದ. ಎರಡೂ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com