ಕೆಎಸ್‍ಪಿಸಿಬಿ ವಿರುದ್ಧ ಕ್ರಮ ಮಧ್ಯಂತರ ಅರ್ಜಿ ಸಲ್ಲಿಕೆ

ನಗರದ ಕೆರೆಗಳ ಮಾಲಿನ್ಯ ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕೋರಿ ರಾಜ್ಯಸಭಾ...
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ಕೆರೆಗಳ ಮಾಲಿನ್ಯ ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ
ಜರುಗಿಸಲು ಕೋರಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಕೆರೆಗಳ ಸಂರಕ್ಷಣೆ ವಿಚಾರವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ 2014ರ ಅಕ್ಟೋಬರ್‍ನಲ್ಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿನ ಮನವಿಯನ್ನು ತಿದ್ದುಪಡಿ ಮಾಡಿ ಮಧ್ಯಂತರ ಅರ್ಜಿಯನ್ನು ಇದೀಗ ಸಲ್ಲಿಸಲಾಗಿದೆ. `ಕೈಗಾರಿಕಾ ತ್ಯಾಜ್ಯವು ಕೆರೆಗಳಿಗೆ ಸೇರುವುದನ್ನು ತಡೆಯಲು ಹಾಗೂ ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಶಾಸನಬದ್ಧ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸತತವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದ ಬೆಂಗಳೂರಿನ ಜಲ ಸಂಪನ್ಮೂಲವಾದ ಕೆರೆಗಳು ಮತ್ತು ಗಾಳಿ ತೀವ್ರ ಮಟ್ಟದಲ್ಲಿ ಕಲುಷಿತವಾಗುತ್ತಿದೆ.

ಇದರಿಂದ ನಗರದ ನಿವಾಸಿಗಳ ಆರೋಗ್ಯ ಹಾಗೂ ಜೀವನಕ್ಕೆ ಅಪಾಯಕಾರಿಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ಬೆಂಗಳೂರು ಕೆರೆಗಳನ್ನು ಸಂರಕ್ಷಿಸಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹೊಣೆಗಾರಿಕೆ ಮಾಡಬೇಕು. ಕೆರೆಗಳ ಸಂರಕ್ಷಣೆಗೆ ಶಾಸನಾತ್ಮಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಮೂಲಕ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ, ರಾಜ್ಯವ್ಯಾಪ್ತಿ ಕೆರೆ ಜಾಗದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವುದು ಮತ್ತು ಎಲ್ಲ ನೀರಿನ ಪ್ರದೇಶಗಳನ್ನು ಸಂರಕ್ಷಿಸಲಾಗುವುದು ಎಂಬುದಾಗಿ ನ್ಯಾಯಾಲಯಕ್ಕೆ ಖಾತರಿಪಡಿಸಲು ರಾಜ್ಯ ಸರ್ಕಾರದ ಮೂಲಕ ಇತರೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ. ಅರ್ಜಿ ಈ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com