ಉಪಲೋಕಾಯುಕ್ತರ ಪದಗ್ರಹಣ ದೇವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ನ್ಯಾ. ಆನಂದ್

ನಿವೃತ್ತ ನ್ಯಾಯಾಧೀಶ ಎನ್. ಆನಂದ್ ಅವರು ಉಪಲೋಕಾಯುಕ್ತರಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ...
ವಜೂಬಾಯಿ ವಾಲಾ ಮತ್ತು ನ್ಯಾ. ಆನಂದ್
ವಜೂಬಾಯಿ ವಾಲಾ ಮತ್ತು ನ್ಯಾ. ಆನಂದ್

ಬೆಂಗಳೂರು: ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್. ಆನಂದ್ ಅವರು ಉಪಲೋಕಾಯುಕ್ತರಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೊತೆಗೆ ತಕ್ಷಣವೇ ರಾಜಭವನದಿಂದ ಲೋಕಾಯುಕ್ತ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿ ಕಾರ್ಯಾರಂಭ ಮಾಡಿದರು.

ಬುಧವಾರ ಸಂಜೆ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಆನಂದ್ ಅವರು ದೇವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಇದಕ್ಕೂ ಮುನ್ನ ರಾಜ್ಯಪಾಲರ ಅನುಮತಿ ಪಡೆದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನೂತನ ಉಪ ಲೋಕಾಯುಕ್ತರ ನೇಮಕಾತಿ ಆದೇಶವನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಆನಂದ್ ಅವರ ಕುಟುಂಬ ವರ್ಗದವರು, ಆತ್ಮೀಯ ವರ್ಗದವರು ಸಾಕ್ಷಿಯಾದರು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಜಯಚಂದ್ರ, ಕೆ.ಜೆ.ಜಾರ್ಜ್,ಎಚ್. ಕೆ. ಪಾಟೀಲ್, ಎಚ್.ಸಿ.ಮಹದೇವಪ್ಪ,ಎಚ್.ಆಂಜನೇಯ,
ವಿನಯ್ ಕುಮಾರ್ ಸೊರಕೆ, ನ್ಯಾಯಾಧೀಶರಾದ ಎ.ಎನ್. ವೇಣುಗೋಪಾಲ ಗೌಡ, ಬಿ. ವೀರಪ್ಪ, ಅಶೋಕ್ ಬಿ ಹಿಂಚಿಗೇರಿ, ಎಲ್ .ನಾರಾಯಣ ಸ್ವಾಮಿ ಹಾಗೂ ಬಿ. ಶ್ರೀನಿವಾಸೇಗೌಡ ಈ ಮುನ್ನ ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಚಂದ್ರಶೇಖರಯ್ಯ ಹಾಗೂ ನ್ಯಾಯಮೂರ್ತಿ ಎಸ್. ಬಿ.ಮಜಗೆ, ಬೆಂಗಳೂರು ನಗರ ಪೋಲೀಸ್ ಆಯುಕ್ತ ನರಸಿಂಹ ಎನ್ ಮೇಘರಿಕ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

ನಂತರ ಏಳು ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನೂತನ ಉಪ ಲೋಕಾಯುಕ್ತರು, ತಮ್ಮ ಖುರ್ಚಿಯಲ್ಲಿ ಆಸೀನರಾಗಿ ಕರ್ತವ್ಯ ಆರಂಭಿಸಿದರು. ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯನ್ನು ಪರಿಚಯ ಮಾಡಿಕೊಂಡು ಸಂಚಲನ ಮೂಡಿಸಿದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ ನ್ಯಾ.ಆನಂದ್, ನನ್ನ ಕಚೇರಿ ಬಾಗಿಲು ನ್ಯಾಯ ಅರಸಿ ಬರುವವರಿಗಾಗಿ ಸದಾ ತೆಗೆದಿರುತ್ತದೆ. ಈ ಸಂಸ್ಥೆ ಇರುವುದೇ ನ್ಯಾಯ ಕೊಡಿಸುವುದಕ್ಕಾಗಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com