ಕುಡಿಯುವ ನೀರಿಗಾಗಿ ಮಾತ್ರ ಎತ್ತಿನಹೊಳೆ: ಸರ್ಕಾರ ಸ್ಪಷ್ಟನೆ

ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಅತ್ಯಂತ ಬರಪೀಡಿತ ಹಾಗೂ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಯೋಜನೆಗೆ 13.93 ಹೆಕ್ಟೇರ್ ಪ್ರದೇಶದ ಅಗತ್ಯವಿದ್ದು, ಇದರ ತೀರುವಳಿಗಾಗಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಡಿಸೆಂಬರ್ 18 ರಂದು ನಡೆಯುವ ಪ್ರಾದೇಶಿಕ ಉನ್ನತ ಅಧಿಕಾರಿಗಳ ಸಮಿತಿಗೆ ಅಂತಿಮ ತೀರ್ಮಾನಕ್ಕಾಗಿ ಸಲ್ಲಿಸಲಾಗಿದೆ.

ಅರಣ್ಯ ಇಲಾಖೆಯು ಅರಣ್ಯ ಕಾಯಿದೆ ಉಲ್ಲಂಘನೆ ಮಾಡಿಲ್ಲ ಎಂದು ದೃಢೀಕರಿಸಿದ್ದರೂ ಕೂಡ, ನ್ಯಾಯಾಧೀಕರಣದ ಸಲಹೆ ಮೇರೆಗೆ ಹಾಗೂ ಅರಣ್ಯ ಪ್ರದೇಶದ ತೀರುವಳಿ ಪ್ರತಿಕ್ರಿಯೆ ಅಂತಿಮ ಘಟ್ಟವನ್ನು ತಲುಪಿರುವುದರಿಂದ, ಪ್ರಕರಣದ ಮುಂದಿನ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ನೀಡಲಾಗಿದೆ. ಯಾವುದೇ ಕಾಮಗಾರಿ ನಡೆಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಲಾಗಿದ್ದು, ಇದರ ಅನುಸಾರ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಎಲ್ಲಾ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡಿ, ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದು ಯೋಜನಾ ಪ್ರದೇಶದ ಜನರ ಗಮನಕ್ಕೆ ಬಂದಿದ್ದು, ಈ ವಿಷಯದಲ್ಲಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ ಯಾವುದೇ ವ್ಯಕ್ತಿಯಿಂದ ಆಕ್ಷೇಪಣೆ ಅಥವಾ ದೂರುಗಳು ಬಂದಿಲ್ಲ ಎಂದು ಸರ್ಕಾರ ಹೇಳಿದೆ. ಪರಿಸ್ಥಿತಿ ಹೀಗಿರುವಲ್ಲಿ, ಈ ಹಿಂದೆ ಸದರಿ ಯೋಜನೆಯ ಅನುಷ್ಠಾನ ಪ್ರಶ್ನಿಸಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅರ್ಜಿ ಸಲ್ಲಿಸಿ, ನ್ಯಾಯಾಧೀಕರಣದಿಂದ ತಿರಸ್ಕೃತಗೊಂಡ ಅರ್ಜಿದಾರ ಎನ್. ಸೋಮಶೇಖರ್ ಎಂಬುವವರು ಮಾಧ್ಯಮಗಳಲ್ಲಿ ವಿನಾ ಕಾರಣ ಸುಳ್ಳು ಸುದ್ದಿ ನೀಡುತ್ತಿದ್ದಾರೆ ಎಂದು ಭದ್ರ ಮೇಲ್ಡಂಡೆ ಯೋಜನೆ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.ಯೋಜನೆ ಸದುದ್ದೇಶ ಹೊಂದಿದ್ದು, ಇದರ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳಿಗೆ ಜನ ಕಿವಿಗೊಡಬಾರದು ಎಂದು ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com