ರಿಯಲ್ ಎಸ್ಟೇಟ್‍ಗೆ ಬರ್ತಿದೆ ಕಾಯ್ದೆ

ರಿಯಲ್ ಎಸ್ಟೇಟ್ ಅವ್ಯವಹಾರ ತಡೆಯುವುದಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರ ಈಗ ಕೇಂದ್ರದ ಕಾಯ್ದೆಯನ್ನೇ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಿಯಲ್ ಎಸ್ಟೇಟ್ ಅವ್ಯವಹಾರ ತಡೆಯುವುದಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರ ಈಗ ಕೇಂದ್ರದ ಕಾಯ್ದೆಯನ್ನೇ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ಕಾಯ್ದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಅದನ್ನೇ ಜಾರಿಗೆ ತರುವ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ. ಕೆಲ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಕಾಯ್ದೆ ಬಿಗಿಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ರಾಜಧಾನಿಯಲ್ಲಿ ಅನಧಿಕೃತವಾಗಿ ಫ್ಲ್ಯಾಟ್‍ಗಳನ್ನು ನಿರ್ಮಿಸಿ ಮಾರಾಟ ಮಾಡುವುದು, ಸರ್ಕಾರಿ ಭೂಮಿಯನ್ನು ತೋರಿಸಿ ಸೈಟ್ ರಚಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ತುಮಕೂರು- ಕುಣಿಗಲ್ ಭಾಗದಿಂದ ಬಂದಿದ್ದ 50ಕ್ಕೂ ಹೆಚ್ಚು ಜನರಿದ್ದ ನಿಯೋಗ ಸೋಮವಾರ ಬೆಳಗ್ಗೆ ಸಚಿವ ಜಯಚಂದ್ರ ಅವರನ್ನು ಭೇಟಿ ಮಾಡಿ ತಮಗಾದ ವಂಚನೆಯನ್ನು ವಿವರವಾಗಿ ಹೇಳಿತು. ಅಲ್ಲದೆ, ಸೂಕ್ತ ಕ್ರಮಕ್ಕೆ ಒತ್ತಾಯಿಸಿತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಪ್ರತಿಕ್ರಿಯೆ ನೀಡಿದರು.

ತುಮಕೂರು- ಕುಣಿಗಲ್ ಭಾಗದಲ್ಲಿ ಫ್ಲ್ಯಾಟ್ ವಂಚನೆ ಪ್ರಕರಣಗಳು ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ರಿಯಲ್ ಎಸ್ಟೇಟ್ ಅವ್ಯವಹಾರವನ್ನು ಈಗಲೇ ಹತ್ತಿಕ್ಕದೇ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ಹೊರವಲಯದಲ್ಲಿ ಸರ್ಕಾರಿ ಜಮೀನು ತೋರಿಸಿ ಇದು ತಮ್ಮದೇ ಲೇಔಟ್ ಎಂದು ನಂಬಿಸಿ ದಾಖಲೆ ಸೃಷ್ಟಿಸಿ ಅಮಾಯ ಕರಿಗೆ ಸೈಟು ಮಾರಾಟ ಮಾಡಲಾಗುತ್ತಿದೆ. ಮುಂದೊಂದು ದಿನ ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಾಗಲೇ ಅದು ಸರ್ಕಾರಿ ಭೂಮಿ ಎಂದು ಗೊತ್ತಾಗುತ್ತಿದೆ. ಇದರಿಂದ ಮಧ್ಯಮ ವರ್ಗದ ಅದೆಷ್ಟೋ ಜನ ಜೀವನ ಪೂರ್ತಿ ದುಡಿದು ಕೂಡಿಟ್ಟು ಖರೀದಿಸಿದ ನಿವೇಶನ, ಮನೆಯನ್ನು ಕಳೆದುಕೊಳ್ಳುವಂ ತಾಗಿದೆ ಎಂದರು.

ಇನ್ನು ಮುಂದೆ ಈ ರೀತಿ ಆಗಬಾರದು ಎಂಬ ನಿಟ್ಟಿನಲ್ಲಿ ಬಿಗಿಯಾದ ಕಾನೂನು ರೂಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ರಿಯಲ್ ಎಸ್ಟೇಟ್‍ಗೆ ನಿಯಂತ್ರಣ ಹೇರಲೇಬೇಕಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com