ಹೊಸ ಹಲ್ಲು ಬಂದ ಅಜ್ಜಿಗೆ ನಾಮಕರಣ

ಅವತ್ತು ಊರಲ್ಲೊಂದು ನಾಮಕರಣ ಕಾರ್ಯಕ್ರಮ. ಊರು ತುಂಬಾ ಹಬ್ಬದ ಸಂಭ್ರಮವೋ ಸಂಭ್ರಮ. ಊರ ಹಿರಿಕಿರಿಯರೆಲ್ಲ ಸೇರಿ ಖುಷಿಯಿಂದ ಮಗುವಿಗೆ ಹೆಸರಿಟ್ಟು ಹರಿಸಿದರು...
ನಾಮಕರಣ ಮಾಡಿಸಿಕೊಂಡ ಮಾಳವಜ್ಜಿ
ನಾಮಕರಣ ಮಾಡಿಸಿಕೊಂಡ ಮಾಳವಜ್ಜಿ
Updated on

ಬೆಳಗಾವಿ: ಅವತ್ತು ಊರಲ್ಲೊಂದು ನಾಮಕರಣ ಕಾರ್ಯಕ್ರಮ. ಊರು ತುಂಬಾ ಹಬ್ಬದ ಸಂಭ್ರಮವೋ ಸಂಭ್ರಮ. ಊರ ಹಿರಿಕಿರಿಯರೆಲ್ಲ ಸೇರಿ ಖುಷಿಯಿಂದ ಮಗುವಿಗೆ ಹೆಸರಿಟ್ಟು ಹರಿಸಿದರು.

ಆದರೆ, ಉಯ್ಯಾಲೆಯಲ್ಲಿ ಕಿಲ ಕಿಲ ನಗುತ್ತಿದ್ದ ಮಗುವಿನ ವಯಸ್ಸು ಮಾತ್ರ 120 ವರ್ಷ! ಇದ್ಹೆಂಗೆ ಸಾಧ್ಯ ಎಂಬ ಅನುಮಾನವೇ! ಆದ್ರೆ ಇದು ಸತ್ಯ! ವಿಜಯಪುರದ ಬಸವನ ಬಾಗೇವಾಡಿ  ತಾಲೂಕಿನ ನಿಡಗುಂದಿ ಗ್ರಾಮದಲ್ಲೊಂದು ಅವಿಭಕ್ತ ಕುಟುಂಬವಿದೆ. ಈ ಕುಟುಂಬದ ಹಿರಿಯಜ್ಜಿ ಮಾಳವ್ವನಿಗೆ ಬರೊಬ್ಬರಿ 120 ವರ್ಷ ವಯಸ್ಸು. ಇಂಥ ಅಪರೂಪದ ದೀರ್ಘಾಯುಷಿಗಳಿಗೆ ಹೊಸ  ಹಲ್ಲು ಮೂಡುವುದು ನಿಯಮ. ಅದರಂತೆ ಈ ಅಜ್ಜಿಗೆ ಹೊಸ ಹಲ್ಲು ಮೂಡಿತ್ತು. ಇದೇ ಈ ನಾಮಕರಣ ಸಂಭ್ರಮಕ್ಕೆ ಕಾರಣವಾಗಿತ್ತು. ಅಂದಹಾಗೆ ಆ ಹೊಸ ಹೆಸರೇನು ಗೊತ್ತೇ? ಪದ್ಮಾವತಿ.

ಕಟಕ್ ರೊಟ್ಟಿ ಕೇಳಿದಳು: ಎಂದಿನಂತೆ ಜೋಳದ ಅಂಬಲಿ ಕೊಡಲು ಹೋದ ಮೊಮ್ಮಗಳಿಗೆ ಅಜ್ಜಿ ಕಟಕ್ ರೊಟ್ಟಿ ಕೇಳಿದ್ದಳು.ಆಗ ಮೊಮ್ಮಗಳಿಗೆ ಗಾಬರಿ. `ಏನಾಗಿದೆ ಅಜ್ಜಿ ನಿಂಗೆ' ಎಂದು  ವಿಚಾರಣೆ ನಡೆಸಿ ದಾಗ ಹೊಸ ಹಲ್ಲು ಮೂಡಿರುವ ಸಂಗತಿ ಬೆಳಕಿಗೆ ಬಂದಿದೆ. ಮೊಮ್ಮಗಳು ಖುಷಿಯಿಂದ ಮನೆಯವರಿಗೆಲ್ಲ ತಿಳಿಸಿದಳು. ಸುದ್ದಿ ಊರಲ್ಲೆಲ್ಲ ಹಬ್ಬಿತು. ಅಜ್ಜಿ ಮನೆ ಎದುರು  ಸಾಲುಗಟ್ಟಿದ ಊರ ಮಂದಿ ಹೊಸ ಹಲ್ಲಿನ ದರ್ಶನ ಪಡೆದದ್ದೇ ಪಡೆದದ್ದು. ಖುಷಿಯಿಂದ ಮನೆಯ ಮುಖಂಡ ಸೊಲ್ಲಾಪುರದ ಕುಲಗುರುಗಳ ಹತ್ತಿರ ವಿಷಯ ಪ್ರಸ್ತಾಪಿಸಿದ್ದಾರೆ. `ಹೊಸ ಹಲ್ಲು  ಮೂಡುವುದೆಂದರೆ ಅದು ಪುನರ್ಜನ್ಮವೇ. ಆದ್ದರಿಂದ ಮಾಳವ್ವಜ್ಜಿಗೆ ಮತ್ತೆ ಮರುನಾಮಕರಣ ಮಾಡಿ' ಎಂದು ಸ್ವಾಮೀಜಿ ಸಲಹೆ ನೀಡಿದರು. ಅದರಂತೆ ನಾಮಕರಣಕ್ಕೆ ಸಿದ್ಧಗೊಂಡ  ಮನೆಯವರು ಊರು ತುಂಬ ಡಂಗುರ ಹೊಡೆಸಿದರು. ಅಕ್ಕಪಕ್ಕದ ಗ್ರಾಮಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದರು.

ಊರಿಗೊಬ್ಳೆ ಪದ್ಮಾವತಿ:
ಮನೆಯ ಪಡಸಾಲೆಯಲ್ಲಿ ನಾಮಕರಣಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಹಸಿರು ಸೀರೆಯುಟ್ಟು ಬಂಗಾರದ ಗೋರಮಾಳ ಹಾಕಿಕೊಂಡಿದ್ದ ಮಾಳವಜ್ಜಿ  ನಸುನಗುತ್ತಲೇ ಪಡಸಾಲೆಗೆ ಬಂದಳು. ಅಷ್ಟರೊಳಗೆ ಆಕೆಯ ವಂಶದ ಬಳ್ಳಿಯಾದ ಮಕ್ಕಳು, ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಗಿರಿಮೊಮ್ಮ ಕ್ಕಳು ಹೀಗೆ ಮನೆ ಮಂದಿಯೆಲ್ಲ ಸಾಲಾಗಿ ಅಜ್ಜಿಯ  ಕಾಲಬುಡದೊಳಗೆ ಮಲಗಿದರು.ಅಜ್ಜಿ ಅವರನ್ನೆಲ್ಲ ದಾಟಿಕೊಂಡು ತೂಗುಯ್ಯಾಲೆಗೆ ಬಂದು ಕುಳಿತಳು .

ಅಜ್ಜಿಯಿಂದ ಹೀಗೆ ದಾಟಿಸಿ ಕೊಂಡ್ರೆ ನೂರು ವರ್ಷ ಆಯಸ್ಸು ವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ.  ಬಳಿಕ ಸ್ವಾಮೀಜಿಗಳು ಅಜ್ಜಿಗೆ ವಿಭೂತಿ ಹಚ್ಚಿ, ಹೂಮಾಲೆ ಹಾಕಿ ಆಕೆ ಕಿವಿಯಲ್ಲಿ ಪದ್ಮಾವತಿ  ಎಂದು ಕರೆದರು. ಬಳಿಕ ಇಳಿ ವಯಸ್ಸಿನ ಅಜ್ಜಿ ಯಾರ ಸಹಾಯವಿಲ್ಲದೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಕ್ಯಾಟ್ ವಾಕ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದಳು. ಅದಾದ ಬಳಿಕ ಮುದ್ದಿನ   ಅಜ್ಜಿಯೊಂದಿಗೆ ಮ ನೆ ಮಂದಿ ಯೆಲ್ಲ ಫೋಟೋ ಸೆಷನ್ ನಡೆಯಿತು. ನೆರೆದ ಮುತ್ತೈದೆಯರು ಸೋಬಾನೆ ಪದ  ಹಾಡಿದರು. ಊರವರಿಗೆಲ್ಲ ಅವತ್ತು ಹೋಳಿಗೆಯೂಟ.

ಅಜ್ಜಿ ಎಂಬ ಆಲದಮರ: ನಿಡಗುಂದಿಯ ಮಾಗಿ ಮನೆತನವೆಂದರೆ ಇಡಿ ತಾಲೂಕಿನಲ್ಲಿಯೇ ಚಿರಪರಿಚಿತ. ಇಲ್ಲಿನ ಜನರಿಗೆ ಮಾಗಿ ಮನೆತನವೆಂದೊಡನೆಯೇ ಬೃಹತ್ತಾದ ಅವಿಭಕ್ತ  ಕುಟುಂಬವೊಂದು ಕಣ್ಮುಂದೆ ಬರುತ್ತದೆ. ಕುಟುಂಬ ವ್ಯವಸ್ಥೆ ಛಿದ್ರಗೊಳ್ಳುತ್ತಿರುವ ಈ ದಿನಗಳಲ್ಲಿ ಈ ಕುಟುಂಬದ ಸದಸ್ಯರ ಸಂಖ್ಯೆ ಬರೊಬ್ಬರಿ 127! ಇಷ್ಟೊಂದು ಮನುಷ್ಯಜೀವಿಗಳಿಗೆಲ್ಲ ಈ  ಮಾಳವಜ್ಜಿಯೇ ಮೂಲ ಬೇರು. ಇನ್ನುಳಿದವರು ಆಲದಮರಕ್ಕೆ ಜೋತು ಬಿದ್ದ ಬಿಳಲುಗಳು. ಮಾಳವಜ್ಜಿಗೆ 11 ಜನ ಮಕ್ಕಳು, 60 ಮೊಮ್ಮಕ್ಕಳು, 37 ಮರಿ ಮಕ್ಕಳು, 20 ಗಿರಿಮೊಮ್ಮಕ್ಕಳಿದ್ದಾರೆ.

ಆರೋಗ್ಯದ ಗುಟ್ಟು ಇಷ್ಟೊಂದು ವಯಸ್ಸಾದ್ರೂ ಅಜ್ಜಿ ಜಗಜಟ್ಟಿಯಂತೆ ಮನೆಯಲ್ಲಿ ಓಡಾಡಿಕೊಂಡಿದ್ದಾಳೆ. ತನ್ನೆಲ್ಲ ಕೆಲಸಗಳನ್ನು ತಾನೆ ಮಾಡಿಕೊಳ್ಳುತ್ತಾಳೆ. ಅಗತ್ಯ ವಿದ್ದಾಗಲೆಲ್ಲ ತನ್ನ ವಂಶದ  ಕುಡಿಗಳಿಗೆ ಮಾರ್ಗದರ್ಶನ ನೀಡುತ್ತಾಳೆ. ಊರಲ್ಲಿನ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾಳೆ. ಮನೆಯಲ್ಲಿ ಯಾರಿಗಾದರು ಆರೋಗ್ಯ ಕೈಕೊಟ್ಟರೆ ಅಜ್ಜಿಯ ಮದ್ದೆ ಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com