ಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟ ಉದ್ವಿಗ್ನ

ಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಪ್ರಕರಣ ಶುಕ್ರವಾರ ನಡೆದಿದೆ. ಕಿಡಿಗೇಡಿಗಳಿಬ್ಬರು ನಡೆಸಿದ ಕೃತ್ಯ ಕೋಮುಗಲಭೆಗೆ ತಿರುಗುವ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸ್ ಅಧಿಕಾರಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಶಿಡ್ಲಘಟ್ಟ: ಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಪ್ರಕರಣ ಶುಕ್ರವಾರ ನಡೆದಿದೆ. ಕಿಡಿಗೇಡಿಗಳಿಬ್ಬರು ನಡೆಸಿದ ಕೃತ್ಯ ಕೋಮುಗಲಭೆಗೆ ತಿರುಗುವ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸ್ ಅಧಿಕಾರಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದಾದ್ಯಂತ ಒಂದು ಕೋಮಿಗೆ ಸಂಬಂಧಿಸಿದ ಭಾವುಟಗಳನ್ನು ಕಟ್ಟಲಾಗಿತ್ತು. ತಡರಾತ್ರಿ ನಗರದ ಕೋಟೆ ಮೊಹಲ್ಲಾದಲ್ಲಿರುವ ಸಿದ್ಧಾರ್ಥ ನಗರದ ಸಮೀಪ ಪಾನಮತ್ತರಾಗಿದ್ದ ಒಂದು ಕೋಮಿಗೆ ಸೇರಿದ ಯುವಕರಿಬ್ಬರು ಈ ಭಾವುಟಗಳನ್ನು ಕಿತ್ತು ಬೆಂಕಿ ಹಚ್ಚಿದ್ದಾರೆಂದು ಹೇಳಲಾಗಿದೆ.

ಈ ವಿಚಾರ ಬೆಳಗ್ಗೆ ಹಬ್ಬುತ್ತಿದ್ದಂತೆ ಒಂದು ಕೋಮಿಗೆ ಸೇರಿದ ಯುವಕರು ನಗರ ಠಾಣೆ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸುವ ಜೊತೆಗೆ ಠಾಣೆ ಒಳನುಗ್ಗಲು ಯತ್ನಿಸಿದರು.
ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಶ್ರೀನಿವಾಸ್ ಪ್ರತಿಭಟನಾಕರ ರೊಂದಿಗೆ ಮಾತನಾಡಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದರೂ ಪ್ರಯೋಜನವಾಗಲಿಲ್ಲ.
ಕೊನೆಗೆ ಆ ಕೋಮಿನ ಮುಖಂಡರೇ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಬೇಕಾಯಿತು.

ಇನ್ನೇನು ಪ್ರತಿಭಟನಾಕಾರರು ಹಿಂತಿರುಗುತ್ತಿದ್ದಾರೆ ಎನ್ನುವಾಗ ಛಾಯಾಗ್ರಾಹರೊಬ್ಬರು ಪ್ರತಿಭಟನಾಕಾರರ ವಾಹನ ತಳ್ಳಲೆತ್ನಿಸಿದಾಗ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಛಾಯಾಗ್ರಾಹಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮತ್ತೆ ಪ್ರತಿಭಟನಾಕಾರರ ಗುಂಪು ಠಾಣೆಗೆ ನುಗ್ಗಲು ಯತ್ನಿಸಿತು. ಆಗ ನಗರ ಠಾಣೆ ಪಿಎಸ್‍ಐ ವಿಜಯರೆಡ್ಡಿ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತು ತಮ್ಮ ಸರ್ವಿಸ್ ರಿವಾಲ್ವಾರ್‍ನಿಂದ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com