ಡಿಗ್ರಿ ಕಾಲೇಜಿನಲ್ಲಿ ಇನ್ನು ನೈತಿಕ ಮೌಲ್ಯದ ಪಾಠ

ಶಾಲಾ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳೆಲ್ಲಾ ಒಂದು ಕಡೆ ಒಟ್ಟಾಗಿ ಸೇರುವ (ಅಸೆಂಬ್ಲಿ) ಸಂಪ್ರದಾಯ ಇನ್ನು ಮುಂದೆ ಡಿಗ್ರಿ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಶಾಲಾ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳೆಲ್ಲಾ ಒಂದು ಕಡೆ ಒಟ್ಟಾಗಿ ಸೇರುವ (ಅಸೆಂಬ್ಲಿ) ಸಂಪ್ರದಾಯ ಇನ್ನು ಮುಂದೆ ಡಿಗ್ರಿ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ.

ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೈನಂದಿನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಉನ್ನತ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ದಿನ ತರಗತಿ ಆರಂಭಕ್ಕೆ ಮುನ್ನ ಒಟ್ಟಾಗಿ ಕಲೆತು(ಅಸೆಂಬ್ಲಿ) ಪ್ರೇರಣದಾಯಿ ಚರ್ಚೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲೆಗಳಂತೆ ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳನ್ನು ತರಗತಿ ಆರಂಭಕ್ಕೆ ಮುನ್ನ ಒಟ್ಟಾಗಿ ಒಂದು ಕಡೆ ಸೇರಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಕಳೆದ ಜೂನ್‍ನಲ್ಲೇ ಪ್ರಸ್ತಾಪಿಸಿ ಆದೇಶಿಸಿತ್ತು. ಆದರೆ, ಇದು ಕಾಲೇಜು ಮಟ್ಟಕ್ಕೆ ಅಷ್ಟು ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಅಲ್ಲದೇ, ಬಹುತೇಕ ಕಾಲೇಜುಗಳು ಈ ಆದೇಶಕ್ಕೆ ಕಿಮ್ಮತ್ತು ನೀಡಿರಲಿಲ್ಲ. ಇದೀಗ ಮತ್ತೆ ಹೊಸ ಆದೇಶ ಹೊರಡಿಸಿರುವ ಕಾಲೇಜು ಶಿಕ್ಷಣ ಇಲಾಖೆ, ಕಡ್ಡಾಯವಾಗಿ ತರಗತಿ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಬೇಕು ಮತ್ತು ಹತ್ತು ನಿಮಿಷ ಉನ್ನತ ಮೌಲ್ಯಗಳ ಕುರಿತು ಚರ್ಚಿಸುವುದು, ಮಾಹಿತಿ ನೀಡುವುದನ್ನು ಕಡ್ಡಾಯವಾಗಿ ಮಾಡಬೇಕೆಂದು ಸೂಚನೆ ನೀಡಿದೆ.

ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಶಕ್ತಿ, ಸಾಮರ್ಥ್ಯದೊಂದಿಗೆ ಸಂವಹನ ಕೌಶಲ್ಯ, ಮಾಹಿತಿ ತಂತ್ರಜ್ಞಾನ, ಉದ್ಯೋಗ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈ ಚಟುವಟಿಕೆ
ಸಹಾಯಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ದಿನ ವಿದ್ಯಾರ್ಥಿಗಳು ಒಂದು ಕಡೆ ಒಟ್ಟಾಗಿ ಸೇರಬೇಕು ಎಂಬುದು ಕಾಲೇಜು ಶಿಕ್ಷಣ ಇಲಾಖೆಯ ಆಶಯ. ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗದವರು ಕಡ್ಡಾಯವಾಗಿ ಈ ವೇಳೆ ಹಾಜರಿರಬೇಕು ಮತ್ತು ಮಾನವೀಯ ಮತ್ತು ನೈತಿಕ ಮೌಲ್ಯಗಳು, ಪ್ರಚಲಿತ ವಿದ್ಯಮಾನಗಳು, ವ್ಯಕ್ತಿತ್ವ ವಿಕಸನ, ಕಾಲೇಜಿಗೆ ಸಂಬಂಧಿಸಿದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತೆ ಮಾತನಾಡುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಭಾಷಣ, ಸಾಮೂಹಿಕ ಚರ್ಚೆ ಹಾಗೂ ವಿವಿಧ ಸ್ಪರ್ಧೆಗಳು ಇತ್ಯಾದಿಗಳ ಮೂಲಕ ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು, ಈ ರೀತಿ ನಡೆಸಿದ ಮಾಹಿತಿಯನ್ನು ಪ್ರತಿ ಶುಕ್ರವಾರ ಕಡ್ಡಾಯವಾಗಿ ಇಲಾಖೆಗೆ ಮಾಹಿತಿ ನೀಡುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ. ಹಾಗಾಗಿ ಇನ್ಮುಂದೆ ಶಾಲಾ ವಿದ್ಯಾರ್ಥಿಗಳ ಹಾಗೆಯೇ ಕಾಲೇಜು ವಿದ್ಯಾರ್ಥಿಗಳೂ ಸಹ ತರಗತಿ ಆರಂಭಕ್ಕೆ ಮುನ್ನ ಶಿಸ್ತು ಪಾಲಿಸಿ ಅಸೆಂಬ್ಲಿಗೆ ಕಡ್ಡಾಯವಾಗಿ ಹಾಜರಾಗಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com