
ಬೆಂಗಳೂರು: `ನಾನು ಚೆನ್ನಾಗಿದ್ದೇನೆ, ಹೀಗಾಗಿ ಸಮಾಜ ಕೂಡ ಚೆನ್ನಾಗಿದೆ ಅಂದುಕೊಂಡಿದ್ದೆ. ಏಕೆಂದರೆ ನಾನು ಕೂಪಮಂಡೂಕನಂತಿದ್ದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಜನರ ಕಷ್ಟ ಏನೆಂಬುದು ಅರ್ಥವಾಯಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಬಿಎಂಪಿ, ಜನಶಕ್ತಿ ಕೇಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾನು ಲೋಕಾಯುಕ್ತನಾಗಿದ್ದ ಅವಧಿಯಲ್ಲಿ 23 ಸಾವಿರ ಪ್ರಕರಣ ದಾಖಲಿಸಲಾಗಿತ್ತು. 750ಕ್ಕೂ ಹೆಚ್ಚು ದಾಳಿ ನಡೆಸಲಾಗಿತ್ತು ಎಂದ ಅವರು, ಲೋಕಾಯುಕ್ತ ಸಂಸ್ಥೆ ಕಳೆದ 40 ವರ್ಷಗಳಿಂದ ಜನರ ಕಷ್ಟ ಹಾಗೂ ಸಮಸ್ಯೆಗಳನ್ನು ಸ್ಪಂದಿಸುತ್ತಾ ಬಂದಿತ್ತು. ಆದರೆ ಒಬ್ಬ ವ್ಯಕ್ತಿಯಿಂದ ಈಗ ಸಂಸ್ಥೆಗೆ ಕಳಂಕ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಈ ಕೂಡಲೇ ಒಬ್ಬ ದಕ್ಷರನ್ನು ಆ ಸಂಸ್ಥೆಗೆ ನೇಮಕ ಮಾಡುವ ಮೂಲಕ ಜನಸ್ನೇಹಿ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಟಿ.ವಿ.ವೆಂಕಟಾಚಲಶಾಸ್ತ್ರಿ ಮಾತನಾಡಿ, ಸಮಾಜದಲ್ಲಿ ಹಣ-ಜಾತಿಯ ಪ್ರಭಾವ ಹೆಚ್ಚಾಗಿದೆ. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement