ಹೊಸ ವರ್ಷಾಚರಣೆ: ಎಲ್ಲೆಡೆ ಪೊಲೀಸ್ ಬಿಗಿ ಕಾವಲು

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಭದ್ರತೆ ದೃಷ್ಟಿಯಿಂದ ನಗರದಲ್ಲಿ ಪೊಲೀಸರ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ...
ಬೆಂಗಳೂರು ಪೊಲೀಸ್ (ಸಂಗ್ರಹ ಚಿತ್ರ)
ಬೆಂಗಳೂರು ಪೊಲೀಸ್ (ಸಂಗ್ರಹ ಚಿತ್ರ)

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಭದ್ರತೆ ದೃಷ್ಟಿಯಿಂದ ನಗರದಲ್ಲಿ ಪೊಲೀಸರ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಮಂದಿ ಜಮಾಯಿಸುವುದರಿಂದ ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಂದೋಬಸ್ತ್ ಗಾಗಿ 10 ಮಂದಿ ಎಸಿಪಿ, 24 ಮಂದಿ ಇನ್ಸ್ ಪೆಕ್ಟರ್, 65 ಸಬ್‍ಇನ್ಸ್‍ಪೆಕ್ಟರ್, 67 ಮಂದಿ ಅಸಿಸ್ಟೆಂಟ್ ಸಬ್‍ಇನ್ಸ್‍ಪೆಕ್ಟರ್, 252 ಮಂದಿ ಹೆಡ್ ಕಾನ್‍ಸ್ಟೇಬಲ್, 503 ಮಂದಿ ಪೇದೆಗಳು, 46 ಮಂದಿ ಮಹಿಳಾ ಪೇದೆಗಳು, 12 ಕೆಎಸ್‍ಆರ್‍ಪಿ ತುಕಡಿ ಹಾಗೂ 2 ಕ್ಯೂಆರ್‍ಟಿ ಆಯೋಜಿಸಲಾಗಿದೆ.

ಅನಿಲ್ ಕುಂಬ್ಳೆ ಸರ್ಕಲ್ ಹಾಗೂ ಎಂಜಿ ರಸ್ತೆಯ ಕಾವೇರಿ ಎಂಪೊೀರಿಯಂ ಬಳಿ ಡಿಎಫ್ ಎಂಡಿ ಅಳವಡಿಸಿದ್ದು, ಬ್ರಿಗೇಡ್ ರಸ್ತೆಗೆ ಬರುವ ಸಾರ್ವಜನಿಕರು ಡಿಎಫ್ ಎಂಡಿ ಮೂಲಕ ಒಳ ಪ್ರವೇಶಿಸಬೇಕು. ಅಂತೆಯೇ ಚರ್ಚ್ ರಸ್ತೆ, ಆರ್‍ಎಚ್‍ಪಿ ರಸ್ತೆ ಮೂಲಕ ಬ್ರಿಗೇಡ್ ರಸ್ತೆಗೆ ಪ್ರವೇಶ ನಿಷೇಧಿಸಲಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ತಾತ್ಕಾಲಿಕವಾಗಿ 10 ವಾಚ್ ಟವರ್ ನಿರ್ಮಿಸಿದ್ದು, ನೈಟ್ ವಿಷನ್ ಬೈನಾಕೂಲರ್ ಬಳಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಸುರಕ್ಷತೆ ದೃಷ್ಟಿಯಿಂದ ಈ ರಸ್ತೆಗಳ ಸರಹದ್ದಿನಲ್ಲಿರುವ ಪ್ರಮುಖ ಹೋಟೆಲ್‍ಗಳು, ಮಾಲ್‍ಗಳು, ಕ್ಲಬ್ ಗಳು, ಬಾರ್ ರೆಸ್ಟೋರೆಂಟ್‍ಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಸಂಭ್ರಮಾಚರಣೆ ವೇಳೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವುದು, ರೇಗಿಸುವುದನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು
ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com