ಕಿದ್ವಾಯಿ ಆಸ್ಪತ್ರೆಗೆ ತ್ಯಾಜ್ಯ ನೋಟಿಸ್

ಇಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಸುರಿಯಲಾಗಿದ್ದ ನೂರಾರು ಲೋಡ್ ಆಸ್ಪತ್ರೆ ತ್ಯಾಜ್ಯ (ಬಯೋ ಮೆಡಿಕಲ್ ವೇಸ್ಟ್) ವನ್ನು ಕೂಡಲೇ ಸೂಕ್ತ ಸ್ಥಳಕ್ಕೆ ರವಾನಿಸುವಂತೆ ಜಿಲ್ಲಾಧಿಕಾರಿ ಗುರುವಾರ ಆದೇಶ ನೀಡಿದ್ದಾರೆ.
ಬಯೋ ಮೆಡಿಕಲ್ ವೇಸ್ಟೇಜ್ (ಸಂಗ್ರಹ ಚಿತ್ರ)
ಬಯೋ ಮೆಡಿಕಲ್ ವೇಸ್ಟೇಜ್ (ಸಂಗ್ರಹ ಚಿತ್ರ)

ಚಿಕ್ಕಬಳ್ಳಾಪುರ: ಇಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಸುರಿಯಲಾಗಿದ್ದ ನೂರಾರು ಲೋಡ್ ಆಸ್ಪತ್ರೆ ತ್ಯಾಜ್ಯ (ಬಯೋ ಮೆಡಿಕಲ್ ವೇಸ್ಟ್) ವನ್ನು ಕೂಡಲೇ ಸೂಕ್ತ ಸ್ಥಳಕ್ಕೆ ರವಾನಿಸುವಂತೆ ಜಿಲ್ಲಾಧಿಕಾರಿ ಗುರುವಾರ ಆದೇಶ ನೀಡಿದ್ದಾರೆ.

``ಆಸ್ಪತ್ರೆ ತ್ಯಾಜ್ಯದ ಕುರಿತು ಮಾಧ್ಯಮಗಳು ಮಾಡಿದ್ದ ವರದಿಗೆ ಶೀಘ್ರವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಬೇರೆಡೆಗೆ ತ್ಯಾಜ್ಯ ವಿಲೇವಾರಿ ಮಾಡುವಂತೆ ನಗರಸಭೆ  ಆಯುಕ್ತರು ಮತ್ತು ಜಿಲ್ಲಾ ಪರಿಸರ ಅಧಿಕಾರಿಗೆ ಸೂಚಿಸಿದ್ದಾರೆ.

ಕಿದ್ವಾಯಿಗೆ ಸೇರಿದ್ದು: ನಗರಸಭೆ ಆಯುಕ್ತ ಗಂಗಾಧರ ಸ್ವಾಮಿ ಹಾಗೂ ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್. ಮಂಜುನಾಥ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂದರ್ಭ ದಲ್ಲಿ ಬೆಂಗಳೂರಿನ  ಕಿದ್ವಾಯಿ ಆಸ್ಪತ್ರೆಗೆ ಸೇರಿದ ಲೆಟರ್‍ಹೆಡ್ ಹಾಗೂ ಮಾತ್ರೆ ಚೀಟಿ (ಪ್ರಿಸ್ಕ್ರಿಪ್ಷನ್) ಸೇರಿದಂತೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದೆ. ಬಳಿಕ ಈ ತ್ಯಾಜ್ಯ ಕಿದ್ವಾಯಿ ಆಸ್ಪತ್ರೆಗೆ ಸೇರಿದ್ದು ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ನಗರಸಭೆ ವಾಹನಗಳ ಮೂಲಕ ಮೀಸಲು ಅರಣ್ಯ ಪ್ರದೇಶ ಮತ್ತು ಖಾಸಗಿ ಜಮೀನಿನಲ್ಲಿದ್ದ ಆಸ್ಪತ್ರೆ ತ್ಯಾಜ್ಯವನ್ನು ಕೋಲಾರದ ಬಯೋಮೆಡಿಕಲ್ ವೇಸ್ಟ್ ಡಂಪಿಂಗ್ ಯಾರ್ಡ್‍ಗೆ ಮತ್ತು ಇತರೆ  ತ್ಯಾಜ್ಯವನ್ನು ಚಿಕ್ಕಬಳ್ಳಾಪುರ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.

ಅಪಾಯಕಾರಿ ಜಾಗ: ಇಲ್ಲಿ ಹಾಕಿರುವ ಆಸ್ಪತ್ರೆ ತ್ಯಾಜ್ಯ ಕ್ಯಾನ್ಸರ್ ರೋಗಕ್ಕೆ ಸಂಬಂಧಪಟ್ಟಿದ್ದಾಗಿದೆ.  ಈ ಜಾಗದಿಂದ ಕೆಲವೇ ಅಡಿಗಳ ದೂರದಲ್ಲಿ ಚೆಕ್ ಡ್ಯಾಮ್ ಸಹ ಇದೆ. ವೀರದಿಮ್ಮಮ್ಮನ  ಕಣಿವೆ ಪ್ರದೇಶ ದಲ್ಲಿರುವ ವನ್ಯಜೀವಿಗಳಿಗೆ ಮತ್ತು ಈ ಭಾಗದಲ್ಲಿರುವ ಹಳ್ಳಿಗಳ ಜಾನುವಾರುಗಳಿಗೆ ಈ ಚೆಕ್ ಡ್ಯಾಮ್ ನಲ್ಲಿರುವ ನೀರು ಕುಡಿಯಲು ಬಳಕೆಯಾಗುತ್ತಿದ್ದು, ಒಂದು ವೇಳೆ ತ್ಯಾಜ್ಯ  ನೀರಿಗೆ ಸೇರಿದ್ದರೆ ಹಲವು ಅವಘಡಗಳಿಗೆ ಕಾರಣವಾಗುತ್ತಿತ್ತು ಎಂದು ಪರಿಸರ ಅಧಿಕಾರಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ವಿಲೇವಾರಿಯಾಗಿರುವ ತ್ಯಾಜ್ಯ ಅಪಾಯಕಾರಿ ಎಂಬ  ಅರಿವಿದ್ದರೂ, ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚದೆ ಇದ್ದ ತ್ಯಾಜ್ಯದ ಮೇಲೆ ಜೆಸಿಬಿ ಮೂಲಕ ಮಣ್ಣು ಮುಚ್ಚುವ ಕೆಲಸ ಮಾಡಿದೆ.

ಆಸ್ಪತ್ರೆಗೆ ನೋಟಿಸ್: ಸ್ಥಳದಲ್ಲಿ ದೊರೆತಿರುವ ಮಾಹಿತಿ ಯನ್ನಾಧರಿಸಿ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ರಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ನಿರ್ಧರಿಸಿದ್ದು,  ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ನೋಟಿಸ್ ನೀಡಲಾಗುವುದು. ಸೂಕ್ತ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವನ್ಯ ಜೀವಿಗಳ ಕುಡಿಯುವ ನೀರಿನ ತಾಣದ ಸಮೀಪದಲ್ಲಿ ಮತ್ತು. ಮೀಸಲು ಅರಣ್ಯ ಪ್ರದೇಶದಲ್ಲಿ ಕ್ಯಾನ್ಸರ್ ಸಂಬಂಧಿ ತ್ಯಾಜ್ಯ ಸುರಿದಿರುವುದು ಅಪರಾಧ ಮತ್ತು ಅಪಾಯಕಾರಿ ಕೃತ್ಯ.  ಜಿಲ್ಲಾಧಿಕಾರಿ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.
- ಸಿ.ಆರ್. ಮಂಜುನಾಥ್, ಜಿಲ್ಲಾ ಪರಿಸರ ಅಧಿಕಾರಿ

ಪರಿಸರ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ನೀಡಿರುವ ವರದಿಯಂತೆ ಆಸ್ಪತ್ರೆ ತ್ಯಾಜ್ಯ ಕಿದ್ವಾಯಿಗೆ ಸೇರಿದ್ದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕಿದ್ವಾಯಿ ನಿರ್ದೇಶಕರಿಗೆ  ನೋಟಿಸ್ ನೀಡಲು ಆದೇಶಿಸಲಾಗಿದೆ.
-ಡಾ ಎಂ ವಿ ವೆಂಕಟೇಶ್, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com