ವಿಚಾರಣೆ ಬಳಿಕ ಗಡಿಪಾರಾಗಿ ಬಂದಿದ್ದ 9 ಮಂದಿಯ ಬಿಡುಗಡೆ

ಟರ್ಕಿ ಗಡಿ ಮೂಲಕ ಇಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾಗೆ ತೆರಳಲು ಯತ್ನಿಸಿ...
ವಿಚಾರಣೆ ಬಳಿಕ ಗಡಿಪಾರಾಗಿ ಬಂದಿದ್ದ 9 ಮಂದಿಯ ಬಿಡುಗಡೆ

ಬೆಂಗಳೂರು: ಟರ್ಕಿ ಗಡಿ ಮೂಲಕ ಇಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾಗೆ ತೆರಳಲು ಯತ್ನಿಸಿ ಗಡಿಪಾರಾಗಿ ಬೆಂಗಳೂರಿಗೆ ಬಂದಿದ್ದ 9 ಮಂದಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

ಎಲ್ಲರೂ ಸಿರಿಯಾಗೆ ತೆರಳುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಯುದ್ಧ ಪೀಡಿತ ಸಿರಿಯಾದಲ್ಲಿನ ನಿರಾಶ್ರಿತರ ಸೇವೆಗೆ ಹೋಗುತ್ತಿದ್ದೆವೇ ವಿನಾ ಐಎಸ್‍ಐಎಸ್ ಸದಸ್ಯರಾಗಲು ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಚಾರಣೆ ವೇಳೆ ಸ್ಥಳೀಯ ಉಗ್ರರ ಅಥವಾ ಯಾವುದೇ ಸಂಘಟನೆ ಜತೆ ಸಂಪರ್ಕ ಇರುವುದು ಕೇಡು ಬಂದಿಲ್ಲ. ಹೀಗಾಗಿ, ಅವರಿಂದ ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರ ಪಡೆದು ಕೌನ್ಸಿಲಿಂಗ್ ಮಾಡಿ ಬಿಟ್ಟು ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಮೂಲದ ಅಬ್ದುಲ್ ಅಹ್ಮದ್ ದಂಪತಿ ಐವರು ಮಕ್ಕಳ ಜತೆ ಹೋಗಿರುವುದು ಪೊಲೀಸರಿಗೆ ಆಶ್ಚರ್ಯ ಉಂಟು ಮಾಡಿದೆ. ಇವರಿಗೆ ತೆಲಂಗಾಣದ ಜೀವಿದ್ ಬಾಬಾ ಹಾಗೂ ಹಾಸನದ ಇಬ್ರಾಹಿಂ ನೌಫಲ್ ಸಂಪರ್ಕ ಸಿಕ್ಕಿದ್ದು ಹೇಗೆ, ಎಲ್ಲರೂ ಯೋಜಿಸಿಯೇ ತೆರಳಿದ್ದರಾ ಅಥವಾ ಭೇಟಿ ಆಕಸ್ಮಿಕವೋ ಎನ್ನುವ ಬಗ್ಗೆ  ಅಧಿಕಾರಿಗಳು ಮಾಹಿತಿ ನೀಡಿಲ್ಲ.

2014ರ  ಡಿ.24 ರಂದು 9 ಮಂದಿ ಪ್ರವಾಸಿ ವೀಸಾ ಮೇಲೆ ಬೆಂಗಳೂರಿನಿಂದ ಇಸ್ತಾಂಬುಲ್‍ಗೆ ತೆರಳಿದ್ದರು. ಪ್ರವಾಸದ ಬದಲು ಟರ್ಕಿ- ಸಿರಿಯಾ ಗಡಿ ಮೂಲಕ ಸಿರಿಯಾಗೆ ತೆರಳಲು ಯತ್ನಿಸಿದ್ದರು. ಟರ್ಕಿ ಗಡಿ ಭದ್ರತೆ ಅಧಿಕಾರಿಗಳ ತಂಡ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಭಾರತಕ್ಕೆ ಗಡಿಪಾರು ಮಾಡಿತು. ಜ.30ರಂದು ಎಲ್ಲರೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com