ವಾಹನ ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆ

ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿ ವಾಕಿ-ಟಾಕಿ, ಬ್ಲ್ಯಾಕ್‍ಬೆರಿ...
ವಾಹನ ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆ

ಬೆಂಗಳೂರು: ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿ ವಾಕಿ-ಟಾಕಿ, ಬ್ಲ್ಯಾಕ್‍ಬೆರಿ ಕಸಿದು ಹಲ್ಲೆ ನಡೆಸಿ ಪರಾರಿಯಾಗಿದ್ದ ಸಾರಿಗೆ ಇಲಾಖೆ ಉದ್ಯೋಗಿ ಹಾಗೂ ಬೆಸ್ಕಾಂ ಅರೆಕಾಲಿಕ ಉದ್ಯೋಗಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ನಿವಾಸಿ, ರಾಜಾಜಿನಗರ ಆರ್‍ಟಿಒ ಉದ್ಯೋಗಿ ವೆಂಕಟಾಚಲ ಹಾಗೂ ಬೆಸ್ಕಾಂನ ಅರೆಕಾಲಿಕ ಉದ್ಯೋಗಿ ಗಿರೀಶ್ ಬಂ„ತರು. ಇಬ್ಬರ ವಯಸ್ಸು 40 ದಾಟಿದ್ದು ಈಗ ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದಾರೆ.

ವಿವರ: ಶನಿವಾರ ರಾತ್ರಿ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಎಸ್ಸೈಗಳಾದ ಮಂಜು ಹಾಗೂ ಶಿವಾನಂದ, ಪೇದೆಗಳ ಜತೆ ಸುಮನಹಳ್ಳಿ ಮೇಲ್ಸೇತುವೆ ಮಾಲಗಾಳ ಬಳಿ ವಾಹನ ಸವಾರರನ್ನು ತಡೆದು ಮದ್ಯಪಾನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮದ್ಯದ ನಶೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಗಿರೀಶ್‍ನನ್ನು ತಡೆದ ಪೇದೆ ಪುಟ್ಟರಾಜು, ಉಸಿರು ತಪಾಸಣೆ ಯಂತ್ರದಲ್ಲಿ ಪರಿಶೀಲಿಸಿದಾಗ ಆತ ಮದ್ಯಪಾನ ಮಾಡಿರುವುದು ಖಚಿತವಾಗಿತ್ತು. ಹೀಗಾಗಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ವಾಹನಗಳ ದಾಖಲೆ ತೋರಿಸುವಂತೆ ಕೋರಿದ್ದಾರೆ. ಇದರಿಂದ ಕುಪಿತಗೊಂಡ ಗಿರೀಶ್ ಪೇದೆ ಜತೆ ವಾಗ್ವಾದ ನಡೆಸಿದ್ದಾನೆ.

ಮಧ್ಯಪ್ರವೇಶಿಸಿದ ಎಸ್ಸೈ ಮಂಜು, ವಾಹನ ದಾಖಲೆ ಹಾಗೂ ಡಿಎಲ್ ತೋರಿಸಲೇಬೇಕು ಎಂದು ತಿಳಿಸಿದ್ದಾರೆ. ಗಿರೀಶ್, ತನ್ನ ಸಹೋದರ ಸಂಬಂಧಿ ವೆಂಕಟಾಚಲನಿಗೆ ಫೋನ್
ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಸಿದ್ದಾನೆ. ಸ್ಥಳಕ್ಕೆ ಬಂದ ಆತ ತನ್ನ ಪ್ರಭಾವ ಬಳಸಿ ಗಿರೀಶ್‍ನನ್ನು ಪ್ರಕರಣ ದಾಖಲಿಸದೆ ಬಿಡಿಸಿಕೊಳ್ಳಲು ಯತ್ನಿಸಿದನಾದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಇಬ್ಬರು ಸೇರಿ ಪೊಲೀಸರಿಗೆ ಅಶ್ಲೀಲ ಪದಗಳಿಂದ ನಿಂದಿಸಲಾರಂಭಿಸಿದರು. ಅಲ್ಲೇ ಇದ್ದ ಎಸ್ಸೈ ಶಿವಾನಂದ, ಅವರನ್ನು ಪ್ರಶ್ನಿಸಿದಾಗ, ಇಬ್ಬರು ವರ ಮೇಲೆ ಹಲ್ಲೆ  ನಡೆಸಿ, ಕನ್ನಡಕ ಮುರಿದು ಹಾಕಿದ್ದಾರೆ. ಅವರ ಬ್ಲ್ಯಾಕ್‍ಬೆರಿ ಫೋನ್ ಕಿತ್ತುಕೊಂಡಿದ್ದಾರೆ.

ಅಲ್ಲೇ ಇದ್ದ ಮತ್ತೊಬ್ಬ ಪೇದೆಯ ವಾಟಿ ಟಾಕಿ ಕಿತ್ತುಕೊಂಡು ಇಬ್ಬರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಕೂಡಲೇ ಸಂಚಾರ ಪೊಲೀಸರು ಕಾಮಾಕ್ಷಿಪಾಳ್ಯ ಕಾನೂನು
ಸುವ್ಯವಸ್ಥೆ ಪೊಲೀಸರಿಗೆ ಕರೆ ಮಾಡಿ ಪ್ರಕರಣವನ್ನು ದಾಖಲಿಸಿದ್ದರು. ಹಲ್ಲೆ ನಡೆಸಿದ ಇಬ್ಬರು ಬಂದಿದ್ದ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಆಧಾರದ ಮೇಲೆ ಇಬ್ಬರನ್ನು ಈಗ ಬಂಧಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ ವೈದ್ಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಹಲ್ಲೆಗೊಳಗಾದ ಎಸ್ಸೈ ಶಿವಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಕಾರಣ ದಾಖಲೆಗಳನ್ನು ತೋರಿಸುವಂತೆ ಕೇಳಿದ್ದೆವು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪದಗಳಲ್ಲಿ ನಿಂದಿಸಿ ಇಬ್ಬರು ತುಂಬ ಕೆಟ್ಟದಾಗಿ ವರ್ತಿಸಿದರು ಎಂದು ಹಲ್ಲೆಗೊಳಗಾದ ಎಸ್ಸೈ ಮಂಜು ಸುದ್ದಿಗಾರರಿಗೆ ತಿಳಿಸಿದರು

655 ಚಾಲನ ಪರವಾನಗಿ
ರದ್ದು ಪಡಿಸಲು ಶಿಫಾರಸು ಮದ್ಯಪಾನ ಮಾಡಿ ವಾಹನ ಚಲಾಯಿಸಿದ 655 ಚಾಲಕರು, ಸವಾರರ ಚಾಲನ ಪರವಾನಗಿ ರದ್ದುಗೊಳಿಸಲು ಸಂಚಾರ ಪೊಲೀಸರು ಸಾರಿಗೆ
ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಶನಿವಾರ(ಜ.31) ರಾತ್ರಿ 9ರಿಂದ 2.00 ಗಂಟೆಯವರೆಗೆ ನಗರದ 104 ಸ್ಥಳಗಳಲ್ಲಿ 8,769 ವಾಹನಗಳನ್ನು ತಪಾಸಣೆ ನಡೆಸಿದ್ದು,
655 ವಾಹನ ಚಾಲಕ, ಸವಾರರು ಮದ್ಯಪಾನ ಮಾಡಿರುವುದು ಕಂಡು ಬಂದಿದೆ.

ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯೊಂದರಲ್ಲೇ 45 ಪ್ರಕರಣಗಳು ದಾಖಲಾಗಿವೆ. 1 ಬಸ್ಸು, 4 ಲಾರಿ, 24 ಆಟೊ, 101 ಕಾರು, 512 ದ್ವಿಚಕ್ರ ವಾಹನ, 9 ಮ್ಯಾಕ್ಸಿ ಕ್ಯಾಬ್ ಮತ್ತು 5 ಟೆಂಪೊ ವಾಹನಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com