ವಿಧಾನಸಭೆ ಈಗ ಝಗಮಗ

ವಿಧಾನಸಭೆ ಅತ್ಯಾಧುನಿಕವಾಗಿ ಸಿಂಗಾರಗೊಂಡಿದೆ. ಮೊಗಸಾಲೆಯಲ್ಲೂ ಅಂದ ದ್ವಿಗುಣಗೊಂಡಿದೆ. ಒಳಗೆ ಹಾಗೂ ಹೊರಗೆ ಪ್ರಕಾಶಮಾನವಾಗಿದೆ. ಎಲ್ಲ ಗೋಡೆಗಳಿಗೂ ಬಣ್ಣ...
ವಿಧಾನಸಭೆ ಈಗ ಝಗಮಗ
Updated on

ವಿಧಾನಸಭೆ: ವಿಧಾನಸಭೆ ಅತ್ಯಾಧುನಿಕವಾಗಿ ಸಿಂಗಾರಗೊಂಡಿದೆ. ಮೊಗಸಾಲೆಯಲ್ಲೂ ಅಂದ ದ್ವಿಗುಣಗೊಂಡಿದೆ. ಒಳಗೆ ಹಾಗೂ ಹೊರಗೆ ಪ್ರಕಾಶಮಾನವಾಗಿದೆ. ಎಲ್ಲ ಗೋಡೆಗಳಿಗೂ ಬಣ್ಣ, ಪಾಲಿಷ್. ಕರ್ಟನ್‍ಗಳೂ ಹೊಸದಾಗಿವೆ. ಹಳೆಯ ಕಾಲದ ಕುರ್ಚಿಗಳು ಮಾಯವಾಗಿ ಐಷಾರಾಮಿ ಸೋಫಾ ಬಂದಿವೆ. ಆದರೂ ಒಂದು ಸಣ್ಣ ಕೊರಗು ಅಲ್ಲಲ್ಲಿದೆ. ಏಕೆಂದರೆ, ಎಲ್ಲರನ್ನೂ ಸಂತೃಪ್ತಿಗೊಳಿಸಲು ಸಾಧ್ಯವಿಲ್ಲವಲ್ಲ! ವಿಧಾನಸಭೆಯಲ್ಲಿ ಆಸನಗಳಷ್ಟೇ ಹೊಸದಾಗಿಲ್ಲ, ನೆಲದ ಹಾಸು ಸಂಪೂರ್ಣ ಬದಲಾಗಿದೆ. ಹಸಿರಿನ
ಹಾಸು ರಾರಾಜಿಸುತ್ತಿದೆ. ಶಾಸಕರ ಆಸನಗಳು `ಹೈಟೆಕ್ಲೆದರ್'ನಿಂದ ಸಜ್ಜುಗೊಂಡಿವೆ. ಈ ಹಿಂದೆ ಮೈಕ್ ಗಳಷ್ಟೇ ಆಧುನೀಕರಣಗೊಂಡಿದ್ದವು. ಇದರ ಜತೆಗೆ ಸಭಾಂಗಣದ ಗೋಡೆಯ ಮರದ ಕೆತ್ತನೆಗಳು ಪಾಲಿಷ್ ನೊಂದಿಗೆ ನಳನಳಿಸುತ್ತಿವೆ. ಎಲ್ಲವೂ ಹಸಿರುಮಯ ವಾಗಿರುವಾಗ `ನಾನೇಕೆ ಸುಮ್ಮನಿರಬೇಕು' ಎಂಬಂತೆ ಕ್ಯಾಲೆಂಡರ್ ಕೂಡ ಹಸಿರದ್ದಾಗಿದೆ. ಸಭಾಂಗಣದ ಮೇಲ್ಭಾಗದಿಂದ ಹೆಚ್ಚು ಬೆಳಕೇ ಬಾರದ ಪರಿಸ್ಥಿತಿ ಇತ್ತು. ಅದೆಲ್ಲ ಶುಭ್ರಗೊಂಡಿದ್ದು, ಹೆಚ್ಚಿನ ಲೈಟ್‍ಗಳನ್ನೂ ತುಂಬಿಕೊಂಡಿದೆ. ಬಣ್ಣವೂ ಲಭ್ಯವಾಗಿರುವುದರಿಂದ ಎಲ್ಲವೂ ಝಗಮಗ. ಸ್ಟ್ಯಾನ್ಲಿ ಎಂಬ ಪ್ರತಿಷ್ಠಿತ ಬ್ರ್ಯಾಂಡ್‍ನ `ಇಂಪೋರ್ಟೆಡ್  ಲೆದರ್'ನ ಸೋಫಾಗಳು ಮೊಗಸಾಲೆಯ ತುಂಬಾ ತುಂಬಿಕೊಂಡಿವೆ. ಈ ಹಿಂದೆ ಮೂರು ಸಾಲಿಗೆ ಮಾತ್ರ ಸೀಮಿತವಾಗಿದ್ದ ಹಿಂದಿನ ಕಾಲದ ಸೋಫಾಗಳು ಬದಲಾಗಿವೆ. ಜತೆಗೆ ಇನ್ನೊಂದು ಸಾಲು ಸೇರಿಕೊಂಡಿದೆ.ಅಲ್ಲದೆ, ಒಬ್ಬರು ಓಡಾಡಲು ಜಾಗ ಬಿಟ್ಟು ಸಿಕ್ಕಸಿಕ್ಕ ಜಾಗದಲ್ಲೆಲ್ಲ ಸೋಫಾಗಳನ್ನು ತುಂಬಲಾಗಿದೆ. ಇನ್ನು ಶೌಚಾಲಯದ ಮುಂದಿನ ಬೃಹತ್ ಮೊಗಸಾಲೆಯಲ್ಲಿ ವಿರೋಧಪಕ್ಷವೊಂದು ಶಾಸಕಾಂಗ ಪಕ್ಷದ ಸಭೆಯನ್ನೇ ನಡೆಸಬಹುದಾದಷ್ಟು ಸೋಫಾಗಳನ್ನು ಹಾಕಲಾಗಿದೆ. ಚೇರ್‍ಗಳೂ ಪ್ರತಿಷ್ಠಿತ ಬ್ರ್ಯಾಂಡ್‍ನವಾಗಿರುವುದರಿಂದ ಮೊಗಸಾಲೆ `ಬ್ರ್ಯಾಂಡೆಡ್' ಆಗಿದೆ. ಇದೆಲ್ಲ ಸವಲತ್ತುಗಳನ್ನು ಕಂಡ ಕೆಲ ಶಾಸಕರು, `ಇನ್ನು ಮುಂದೆ ಒಳಗಿನ ಬದಲು ಹೊರಗೇ ಹೆಚ್ಚು ಆರಾಮಾಗಿ ಕೂರಬಹುದು. ಮೊಗಸಾಲೆ ಯಲ್ಲೇ ಉಳಿಯಬಹುದು'
ಎಂದು ಮನದಾಳದ ಮಾತು ಹೇಳಿಕೊಂಡರು. ಇನ್ನು ಕೆಲವು ಶಾಸಕರು, ತಮ್ಮದೇ ಸಲಹೆಯನ್ನು`ಪುಕ್ಕಟೆಯಾಗಿ' ಸಚಿವಾಲಯದ ಸಿಬ್ಬಂದಿಗೆ ಹೇಳಿದ್ದೇ ಹೇಳಿದ್ದು. `ಯಾವನೋ ಹೀಗೆ ಹಾಕಿದ್ದು. ಇಲ್ಲಿ ಕುಳಿತು ಕೊಳ್ಳೋಕೆ ಸಾಧ್ಯನಾ? ಆ ಸೋಫಾ ಸಾಲೇ ತೆಗೆಸಿಬಿಡೋ. ಅದನ್ನು ಈ ಮುಖ ಮಾಡಿ ತಿರುಗಿಸು. ಆ ಕಡೆ ತಿರುಗಿಸು' ಎಂದು ಒಬ್ಬೊಬ್ಬ ಶಾಸಕರು ಒಂದೊಂದು ರೀತಿ ಹೇಳಿ ಗೊಂದಲ ಮೂಡಿಸಿದ್ದರು. ಒಬ್ಬರು ಹೇಳಿದ್ದನ್ನು ಸರಿಪಡಿಸಲು ಮುಂದಾದರೆ, ಇನ್ನೊಬ್ಬರೂ ಇರುವುದೇ ಸರಿ ಎನ್ನುತ್ತಿದ್ದರು. ಯಾರ ಮಾತು ಕೇಳಬೇಕು ಅರಿಯದೆ ಸಿಬ್ಬಂದಿ ಕಂಗಾಲಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com