
ಬೆಂಗಳೂರು: ವಿಶ್ವ ಹಿಂದೂ ಪರಿಷತ್‍ನ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ನಗರಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಶುಕ್ರವಾರ ಈ ಕುರಿತು ಮಧ್ಯಂತರ ತೀರ್ಪು ಪ್ರಕಟಿಸಿದ ನ್ಯಾ.ಅಬ್ದುಲ್ ನಜೀರ್ ಅವರಿದ್ದ ಪೀಠ, ನಗರ ಪೊಲೀಸ್ ಆಯುಕ್ತರು ಸೆಕ್ಷನ್ (2)ರ ಸೆಕ್ಷನ್ 20ರ ಅನ್ವಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿಯೂ ಕಾರ್ಯನಿರ್ವಹಿಸಬಹುದು. ಸರ್ಕಾರ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿಯೂ ಸಹ ನೇಮಿಸಬಹುದು. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿಯೂ ಸಹ ಆಯುಕ್ತರು ಕರ್ತವ್ಯ ನಿಭಾಯಿಸುವುದರಿಂದ ಆಯುಕ್ತರು ಹೊರಡಿಸಿರುವ ಆದೇಶ ಕಾನೂನುಬಾಹಿರ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಆಯುಕ್ತರು ಸದುದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಕಾರಣಕ್ಕಾಗಿ ಅರ್ಜಿದಾರರು ಕೋರಿರುವ ಮಧ್ಯಂತರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹಲವು ಗಣ್ಯಾತಿಗಣ್ಯರು ಆಗಮಿಸಲಿದ್ದು, ಸಮಾರಂಭ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಅರ್ಜಿದಾರರಾದ ಪ್ರವೀಣ್ ತೊಗಡಿಯಾ ಆಗಮನಕ್ಕೆ ಮಾತ್ರ ನಿರ್ಬಂಧ ಹೇರಲಾಗಿದೆ. ಈ ಹಿಂದೆ ಎರಡು ತಿಂಗಳಿನಿಂದ ಹೆಚ್ಚು ಸಮಾರಂಭ ಚರ್ಚೆಗಳಿಗೆ ತೊಗಡಿಯಾ ಆಗಮಿಸಿದ್ದು ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂಬ ವಾದ ಪರಿಗಣಿಸಲು ಸಾಧ್ಯವಿಲ್ಲ. ಕಾರಣ ಚರ್ಚೆ ಸಮಾರಂಭಗಳು ನಡೆದ ಸ್ಥಳಗಳೆ ಲ್ಲವೂ ಸಣ್ಣ ಪ್ರದೇಶಗಳಾಗಿದೆ. ಅದನ್ನೇ ಇಲ್ಲಿಯೂ ನಿರೀಕ್ಷಿಸಲು ಸಾಧ್ಯವಿಲ್ಲ.
ಮೆಟ್ರೋಪಾಲಿಟನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಸಾಕಷ್ಟು ಜನ ಆಗಮಿಸುವ ನಿರೀಕ್ಷೆಯಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಆಯುಕ್ತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಆಯುಕ್ತರು ಹೊರಡಿಸಿರುವ ಆದೇಶಕ್ಕೆ, ಕೋರ್ಟ್ ಮೇಲ್ಮನವಿ ಪ್ರಾಧಿಕಾರವಾಗಿ ಮಧ್ಯ ಪ್ರವೇಶಿಸಿ ಅವರ ಅಧಿಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಗುಂಪು ಅಥವಾ ಪ್ರತ್ಯೇಕವಾಗಿ ಯಾರಾದರು ಸಭೆ ಸಮಾರಂಭ ಆಯೋಜಿಸುವ ಹಿಂದೆ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡುವುದಾಗಿ ತಿಳುದುಬಂದರೆ ಅಂತಹ ಪ್ರಚೋದನಾಕಾರಿ ಭಾಷಣ ಮಾಡಿದವರ ಹಿನ್ನೆಲೆ ತಿಳಿದುಕೊಂಡು ಅವರ ಆಗಮನಕ್ಕೆ ನಿರ್ಬಂಧ ಹೇರುವ ಅಧಇಕಾರ ಸರ್ಕಾರಕ್ಕೆ ಇದೆ. ಅರ್ಜಿದಾರರು 2002 ರಿಂದ ಈ
ವರೆಗೂ ಅವರು ವಿವಿಧೆಡೆ ಮಾಡಿರುವ ಭಾಷಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಆಯುಕ್ತರು ಈ ಅಂಶವನ್ನು ಪರಿಗಣಿಸಿಯೇ ನಿರ್ಬಂಧದ ಆದೇಶ ಹೊರಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುವ ಆದೇಶಕ್ಕೆ ಕೋರ್ಟ್ ಮಧ್ಯ ಪ್ರವೇಶಿಸಬಾರದು ಎಂದು ಸುಪ್ರೀಂಕೋರ್ಟ್ ಸಹ ತಿಳಿಸಿದೆ ಎಂದು ಏಕಸದಸ್ಯ ಪೀಠ ಆದೇಶದಲ್ಲಿ ತಿಳಿಸಿ ಅರ್ಜಿದಾರರು ಕೋರಿದ್ದ ಮದ್ಯಂತರ ಮನವಿಯನ್ನು ತಿರಸ್ಕರಿಸಿದೆ.
ನಗರದಲ್ಲಿ ಫೆ.8ರಂದು ವಿಶ್ವ ಹಿಂದೂ ಪರಿಷತ್‍ನ ಸುವರ್ಣ ಜಯಂತಿ ಆಚರಣೆ ಹಾಗೂ ವಿರಾಟ ಹಿಂದೂ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಅವರು ಆಗಮಿಸಲು ಇಚ್ಛಿಸಿದ್ದರು. ಆದರೆ ಇದಕ್ಕೆ ಅನುಮತಿ ನೀಡಲು ನಗರ ಪೊಲೀಸ್ ಆಯುಕ್ತರು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ತೊಗಾಡಿಯಾ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ಅರ್ಜಿಯಲ್ಲಿನ ಮಧ್ಯಂತರ ಮನವಿಯಲ್ಲಿ ಪೊಲೀಸ್ ಆಯುಕ್ತರ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.
Advertisement