ವಜಾ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ರಾಜ್ಯ ಸರ್ಕಾರದ...
ವಜಾ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಪಿ.ನಾಗರಾಜು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿದ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಪಿ.ನಾಗರಾಜು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.ಶುಕ್ರವಾರ ಅರ್ಜಿ ಕೈಗೆತ್ತಿಕೊಂಡ ನ್ಯಾ.ಬಿ.ಎಸ್. ಪಾಟೀಲ್ ಅವರ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸಕೈಗೊಂಡಿದ್ದಲ್ಲದೇ, ಅಧಿಕಾರ ದುರ್ಬಳಕೆ ಮತ್ತು ನೇಮಕಾತಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಪಿ.ನಾಗರಾಜು ಅವರನ್ನು ಸರ್ಕಾರ ವಜಾಗೊಳಿಸಿ ಆದೇಶಿಸಿತ್ತು.

ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ನಾಗರಾಜು, ಸರ್ಕಾರ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದೆ. ಆರೋಪಗಳ ಕುರಿತು ಸ್ಪಷ್ಟೀಕರಣ ಕೋರಿ ನೀಡಿದ್ದ ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ. ಸಹಕಾರ ಇಲಾಖೆ ನಿಬಂಧನೆಗಳ ಪ್ರಕಾರ ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಏಳು ದಿನಗಳ ಕಾಲ ಸಮಯ ನೀಡಬೇಕಿದ್ದು, ತಮಗೆ ಕೇವಲ ಎರಡು ದಿನದಲ್ಲಿ ಉತ್ತರಿಸಲು ಸೂಚಿಸಲಾಗಿತ್ತು ಎಂದು ದೂರಿದರು. ಸರ್ಕಾರದ ಪರ ರಾಜ್ಯ ಅಡ್ವೊಕೇಟ್ ಜನರಲ್ ಪ್ರೊ..ರವಿವರ್ಮ ಕುಮಾರ್ ವಾದಿಸಿ, ಅರ್ಜಿದಾರರು ತಮ್ಮ ವಿರುದಟಛಿ ಆದೇಶ ಪ್ರಶ್ನಿಸಿ ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ನಿಯಮಗಳ ಪ್ರಕಾರ ಅವರು ಸಹಕಾರಿ ಇಲಾಖೆಯ ರಿಜಿಸ್ಟ್ರಾರ್‍ಗೆ ಮನವಿ ಸಲ್ಲಿಸಬೇಕಿತ್ತು. ಹೀಗಾಗಿ, ಈ ಅರ್ಜಿ ಉರ್ಜಿತವಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ ಎಂದು ಅರ್ಜಿದಾರರರು ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಪ್ರಕರಣದ ಕುರಿತು ಉತ್ತರಿಸಲು ಅರ್ಜಿದಾರರಿಗೆ ಸೂಕ್ತ ಕಾಲಾವಕಾಶ ಒದಗಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ತಿಳಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ಪೀಠದ ಗಮನಕ್ಕೆ ತಂದರು.ವಾದ ವಿವಾದ ಆಲಿಸಿದ ಏಕಸದಸ್ಯ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮೂಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com