'ಯದು'ವಂಶಕ್ಕೆ ಸಿಕ್ಕ 'ವೀರ' ಉತ್ತರಾಧಿಕಾರಿ

ಯದುವೀರ್
ಯದುವೀರ್

ಮೈಸೂರು: ದೇಶದ ಪ್ರತಿಷ್ಠಿತ ರಾಜಮನೆತನಗಳಲ್ಲಿ ಒಂದಾದ ಮೈಸೂರಿನ ಯದುವಂಶಕ್ಕೆ ಈಗ ಯದುವೀರ್ ಅವರನ್ನು ದತ್ತು ಪುತ್ರರನ್ನಾಗಿ ಸ್ವೀಕರಿಸುವ ಕಾರ್ಯಕ್ರಮ ಫೆ. 23ರಂದು ನಗರದ ಅಂಬಾವಿಲಾಸ ಅರಮನೆಯಲ್ಲಿ ನಡೆಯುವುದು ನಿಶ್ಚಿತವಾಗಿದೆ. ಆದರೆ ಪಟ್ಟಾಭಿಷೇಕ ಪ್ರಕ್ರಿಯೆ ಸದ್ಯಕ್ಕೆ ಇಲ್ಲ ಎಂದು ಅರಮನೆಯ ಮೂಲಗಳು ಸ್ಪಷ್ಟಪಡಿಸಿವೆ.

ಅಲಮೇಲಮ್ಮನ ಶಾಪ ಎಂದು ನಂಬಲಾದ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಮೈಸೂರು ರಾಜವಂಶಸ್ಥರ ಒಬ್ಬರಿಗೆ ಮಕ್ಕಳಾದರೆ, ಮತ್ತೊಬ್ಬರಿಗೆ ಮಕ್ಕಳಾಗದ ಸ್ಥಿತಿ ಇದೆ. ಕಳೆದ ವರ್ಷ ಡಿ. 10 ರಂದು ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಇದುವರೆಗೆ ದತ್ತು ಸ್ವೀಕಾರ ನಡೆದಿರಲಿಲ್ಲ. ವಿಜಯ ದಶಮಿಯ ದಿನಗಳಲ್ಲಿ ನಿಯಮದಂತೆ ಪೂಜಾ ವಿಧಿ ವಿಧಾನಗಳು ನಡೆಯಬೇಕಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರಕ್ಕೆ ಪ್ರಮೋದಾದೇವಿ ಮುಂದಾಗಿದ್ದಾರೆ.

ಈ ಸಂಬಂಧ ಅರಮನೆ ಮಂಡಳಿ ಅಧಿಕಾರಿಗಳಿಗೆ ಪರೋಕ್ಷ ಸೂಚನೆ ದೊರೆತಿದೆ. ಅರಮನೆ ರಾಜಮನೆತನದ ಕಚೇರಿ ಕಾರ್ಯದರ್ಶಿಗೆ ಫೆ. 20 ರಿಂದ ನಾಲ್ಕು ದಿನಗಳ ಕಾಲ ಅರಮನೆಯ ಕಲ್ಯಾಣ ಮಂಟಪ, ದರ್ಬಾರ್ ಸಭಾಂಗಣ, ಅಂಬಾವಿಲಾಸವನ್ನು ಸ್ವಚ್ಛಗೊಳಿಸಿ ಕಾರ್ಪೆಟ್ ಹಾಕಿ ಸಿದ್ದಪಡಿಸುವಂತೆ ಹೇಳಲಾಗಿದೆ ಎಂದು ತಿಳಿದುಬಂದಿದೆ.

ಮುಹೂರ್ತ ನಿಗದಿ: ಈ ನಡುವೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೆ ಅರಸ್ ಫೆ. 20ರಂದು ಮೈಸೂರಿಗೆ ಆಗಮಿಸಲಿದ್ದಾರೆ.

ಫೆ. 23 ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯುವುದು. ಆದರೆ, ಪಟ್ಟಾಭಿಷೇಕ ಕಾರ್ಯಾಕ್ರಮ ಸ್ವಲ್ಪ ತಡವಾಗಲಿದೆ. ಕೆಲವು ಮೂಲಗಳ ಪ್ರಕಾರ ಯದು ವೀರ್ ಅವರು ಮತ್ತೆ ವಿದೇಶದಲ್ಲಿ ವ್ಯಾಸಂಗ ಮುಂದುವರಿಸುವ ಸಾಧ್ಯತೆ ಇದೆ. ಇದನ್ನು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಬೇಕಿದೆ.

ವಿಧಿ, ವಿಧಾನ ಹೇಗೆ? ಪಟ್ಟಾಭಿಷೇಕಕ್ಕೆ ಕೂರುವವರು ರಾಜವಂಶಸ್ಥರಾಗಿರಬೇಕು. ಅದರಂತೆ ಯದುವೀರ್ ಅವರನ್ನು ಮೊದಲು ದತ್ತು ಪಡೆದು ರಾಜವಂಶಸ್ಥರಾದ ಬಳಿಕ, ಅವರಿಗೆ ಪಟ್ಟ ಕಟ್ಟುವುದು ನಿಯಮ. ಆ ವೇಳೆ ಅರಮನೆಯಲ್ಲಿರುವ ಬೆಳ್ಳಿಯ ಭದ್ರಾಸನದಲ್ಲಿ ಕೂರಿಸಿ ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ. ಈಗ ದತ್ತು ಸ್ವೀಕರಿಸಿದ ಬಳಿಕ ಅಥವಾ ಪಟ್ಟಾಭಿಷೇಕವಾದ ಬಳಿಕ ಯದುವೀರ್ಗೆ ಮತ್ತೊಂದು ಹೆಸರಿಡಬಹುದು. ಉದಾಹರಣೆಗೆ ಯದುವೀರ್ ಒಡೆಯರ್ ಅಥವಾ ಯದುವೀರ್ ಕೃಷ್ಣರಾಜ ಒಡೆಯರ್ ಎಂದು ಹೆಸರಾಗಬಹುದು.


-ಡಿ.ಎನ್ ಮಹೇಂದ್ರ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com