ಏರೋ ಇಂಡಿಯಾ ಏರ್ ಷೋನಲ್ಲಿ ಕಳಂಕಿತ ಸಂಸ್ಥೆಗಳಿಗೆ ಅವಕಾಶ..!

ಕೇಂದ್ರ ರಕ್ಷಣಾ ಇಲಾಖೆಯ ಪ್ರತಿಷ್ಟಿತ ಏರೋ ಇಂಡಿಯಾ ಏರ್ ಷೋ ಕಾರ್ಯಕ್ರಮದಲ್ಲಿ ಕಳಂಕಿತ ಸಂಸ್ಥೆಗಳು ಭಾಗವಹಿಸಲು ಅವಕಾಶ ನೀಡಲಾಗಿದೆ...
ಏರೋಇಂಡಿಯಾ ಏರ್ ಷೋ-2015 (ಸಂಗ್ರಹ ಚಿತ್ರ)
ಏರೋಇಂಡಿಯಾ ಏರ್ ಷೋ-2015 (ಸಂಗ್ರಹ ಚಿತ್ರ)

ಬೆಂಗಳೂರು: ಕೇಂದ್ರ ರಕ್ಷಣಾ ಇಲಾಖೆಯ ಪ್ರತಿಷ್ಟಿತ ಏರೋ ಇಂಡಿಯಾ ಏರ್ ಷೋ ಕಾರ್ಯಕ್ರಮದಲ್ಲಿ ಕಳಂಕಿತ ಸಂಸ್ಥೆಗಳು ಭಾಗವಹಿಸಲು ಅವಕಾಶ ನೀಡಲಾಗಿದೆ ಎಂಬ ಬೆಳಕಿಗೆ ಬಂದಿದೆ.

ಪ್ರಮುಖವಾಗಿ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಕುಖ್ಯಾತಿ ಪಡೆದಿರುವ ಇಟಲಿ ಮೂಲದ ಫಿನ್ಮೆಕಾನಿಕಾ ಸಂಸ್ಥೆಗೂ ಏರ್ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ ಇತರೆ ವಿವಾದಿತ ವೈಮಾನಿಕ ಸಂಸ್ಥೆಗಳಾದ Selex, Alenia Armacchi, Oto Malera ಮತ್ತು WASS ಕೂಡ ಏರೋಷೋದಲ್ಲಿ ಪಾಲ್ಗೊಳ್ಳುತ್ತಿವೆ.

ಸ್ವತಃ ರಕ್ಷಣಾ ಇಲಾಖೆ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಯಾವುದೇ ವೈಮಾನಿಕ ಸಂಸ್ಥೆಗಳಿಗೂ ಏರ್ ಷೋಗೆ ನಿರ್ಬಂಧ ಹೇರಿಲ್ಲ. ಫಿನ್ ಮೆಕಾನಿಕಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಏರ್ ಶೋನಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಸ್ಪಷ್ಟಪಡಿಸಿವೆ.

ಇದೇ ಫೆಬ್ರವರಿ 18ರಿಂದ 22ರವರೆಗೆ ಬೆಂಗಳೂರಿನ ಯಲಹಂಕ ಸೇನಾ  ವಾಯುನೆಲೆಯಲ್ಲಿ ಆರಂಭಗೊಳ್ಳಲಿರುವ ಏರೋ ಇಂಡಿಯಾ-2015 ಏರ್ ಷೋ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಏರ್‍ಷೋನಲ್ಲಿ ಸುಮಾರು 300 ವಿದೇಶಿ ಕಂಪನಿಗಳು ಪಾಲ್ಗೊಳ್ಳಲಿವೆ. ಜತೆಗೆ, ವಿವಿಧ ರಾಷ್ಟ್ರಗಳ 54 ಸಚಿವರ ಮತ್ತು ಉನ್ನತ ಮಟ್ಟದ ನಿಯೋಗಗಳೂ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಇದು ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಮಾರುಕಟ್ಟೆಯಾಗಿ ಬದಲಾಗುತ್ತಿರುವುದರ ಸಂಕೇತವಾಗಿದೆ. `ಮೇಕ್ ಇನ್ ಇಂಡಿಯಾ' ಘೋಷಣೆಯಡಿ ಏರ್ ಷೋ ನಡೆಯಲಿದೆ. ವೈಮಾನಿಕ, ರಕ್ಷಣೆ ಮತ್ತು ನಾಗರಿಕ ವಿಮಾನಯಾನ ಮಾತ್ರವಲ್ಲದೆ, ರಕ್ಷಣಾ ಉತ್ಪಾದನೆ ಮತ್ತು ವಿಮಾನನಿಲ್ದಾಣ ಮೂಲಸೌಕರ್ಯ ಕ್ಷೇತ್ರಗಳಿಗೂ ಈ ಬಾರಿ ಆದ್ಯತೆ ನೀಡಲಾಗಿದೆ. ಅಮೆರಿಕದ 64 ಕಂಪನಿಗಳು, ಫ್ರಾನ್ಸ್ನ58, ಬ್ರಿಟನ್‍ನ 48, ರಷ್ಯಾದ 41, ಇಸ್ರೇಲ್‍ನ 25, ಜರ್ಮನಿಯ 17 ಕಂಪನಿಗಳು ಸೇರಿದಂತೆ ವಿದೇಶಗಳ 328 ಕಂಪನಿಗಳು ಮತ್ತು ಭಾರತದ 295 ಕಂಪನಿಗಳು ಏರ್‍ಷೋನಲ್ಲಿ ಪಾಲ್ಗೊಳ್ಳಲಿವೆ.

ಇದೇ ವೇಳೆ, ವಿವಿಐಪಿ ಕಾಪ್ಟರ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಫಿನ್‍ಮೆಕ್ಯಾನಿಕಾ ಕಂಪನಿಯೂ ಭಾಗವಹಿಸಲಿದೆ. ಕಳೆದ ವರ್ಷದ ಪ್ರದರ್ಶನದಲ್ಲಿ 156 ಭಾರತೀಯ ಕಂಪನಿಗಳು ಹಾಗೂ 210 ವಿದೇಶಿ ಕಂಪನಿಗಳು ಪಾಲ್ಗೊಂಡಿದ್ದವು. ಇದು ಏಷ್ಯಾದಲ್ಲೇ ನಡೆಯುತ್ತಿರುವ ಅತಿದೊಡ್ಡ ಏರ್ ಷೋ ಎಂದಿರುವ ರಕ್ಷಣಾ ಉತ್ಪಾದನೆ ಕಾರ್ಯದರ್ಶಿ ಜಿ. ಮೋಹನ್ ಕುಮಾರ್, ನಾವು ಮೇಕ್ ಇನ್ ಇಂಡಿಯಾವನ್ನೇ ಪ್ರದರ್ಶನದ ಪ್ರಮುಖ ಥೀಮ್ ಅನ್ನಾಗಿ ಇಟ್ಟುಕೊಂಡಿದ್ದೇವೆ. ರಕ್ಷಣಾ ಕ್ಷೇತ್ರದಲ್ಲೂ ಮೇಕ್ ಇನ್ ಇಂಡಿಯಾ ಪ್ರಗತಿ ಸಾಧಿಸಲಿ ಎನ್ನುವುದೇ ನಮ್ಮ ಉದ್ದೇಶ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com