ಅಗ್ನಿಶಾಮಕ ದಳ ಕಟ್ಟಡಕ್ಕೆ ಜಾಗ ಆದೇಶ ರದ್ದು ಕೋರಿದ್ದ ಅರ್ಜಿ ವಜಾ
ಬೆಂಗಳೂರು: ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿ ಬಳಿ ಅಗ್ನಿಶಾಮಕ ದಳದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೆಂಗೇರಿ ಹೋಬಳಿಯ ಕನಿಮಿನಕೆ ಗ್ರಾಮದ ಬಳಿ ಕೆರೆ ಜಾಗದಲ್ಲಿ ಅಗ್ನಿಶಾಮಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿಶೇಷ ಜಿಲ್ಲಾಧಿಕಾರಿ 1.12 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಈ ಜಾಗ ಕೆರೆಗೆ ಸೇರಿದ್ದಾಗಿದ್ದು ಗ್ರಾಮಸ್ಥರ ಕುಡಿಯುವ ನೀರಿನ ಮೂಲವಾಗಿದೆ. ಆದ್ದರಿಂದ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿ ಕೆ.ಎನ್.ನರಸಿಂಹ ಮೂರ್ತಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ನಿರ್ಮಾಣ ಮಾಡಲು ಮುಂದಾಗಿರುವ ಈ ಕಚೇರಿ ಸಾರ್ವಜನಿಕರ ಹಿತದೃಷ್ಟಿಯದ್ದು. ಇದರಲ್ಲಿ ಯಾವುದೇ ಲೋಪ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಸರ್ಕಾರಿ ವಕೀಲರಾದ ಶ್ವೇತಾ ಕೃಷ್ಣಪ್ಪ ಅವರು, ಅಗ್ನಿ ಶಾಮಕ ದಳ ಕಚೇರಿ ನಿರ್ಮಾಣಕ್ಕೆ ವಿಶೇಷ ಜಿಲ್ಲಾಧಿಕಾರಿ ಜಾಗ ಮಂಜೂರು ಮಾಡಿದ್ದಾರೆ. ಕಂದಾಯ ಇಲಾಖೆಯೂ ಇದಕ್ಕೆ ಒಪ್ಪಿಗೆ ನೀಡಿದೆ. ಈ ಜಾಗ ಕೆರೆ ವ್ಯಾಪ್ತಿಗೆ ಬರುವುದಿಲ್ಲ. ಅದು ಕಲ್ಲು ಕೋರೆಗಳಿಂದ ಕೂಡಿರುವ ಕಟ್ಟೆ ಜಾಗದ ವ್ಯಾಪ್ತಿಗೆ ಬರುತ್ತದೆ. ಅಲ್ಲದೇ ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಗ್ನಿ ಶಾಮಕ ಕಚೇರಿ ಅಗತ್ಯವಿರುವುದಾಗಿ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಇದನ್ನು ಪುರಸ್ಕರಿಸಿದ ವಿಭಾಗೀಯ ಪೀಠ ಅರ್ಜಿದಾರ ಮನವಿ ತಿರಸ್ಕರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ