
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ಕಾನೂನು ಬಾಹಿರ ಮತ್ತು ಜನವಿರೋಧಿ ವಿದ್ಯುತ್ ದರ ಏರಿಕೆ ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದ್ದು, ಕೆಇಆರ್‌ಸಿ ಕ್ರಮವನ್ನು ವಿರೋಧಿಸುವಂತೆ ಶನಿವಾರ ಕರೆ ನೀಡಿದೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣ ರೆಡ್ಡಿ ಅವರು, ವಿದ್ಯುತ್ ಕಂಪನಿಗಳು ತಮ್ಮ ದರ ಏರಿಕೆ ಪ್ರಸ್ತಾವಗಳ ಕುರಿತು ಯಾವುದೇ ಸಮರ್ಥನೆ ನೀಡದಿದ್ದರೂ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿವರ್ಷ ದರ ಏರಿಕೆ ಮಾಡಿ, ಗ್ರಾಹಕರಿಗೆ ಶಾಕ್ ನೀಡುತ್ತಿದೆ ಎಂದರು.
ಪ್ರತಿ ವರ್ಗದ ಗ್ರಾಹಕರ ಸರಬರಾಜು ಸೇವಾ ಖರ್ಚು (Cost of Service) ನಿಗದಿಯಾಗದೆ ದರ ನಿಗದಿಯಾಗಕೂಡದು ಎಂದು ದೆಹಲಿಯ ಅಪೀಲು ನ್ಯಾಯಾಧಿಕರಣವು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಆಯೋಗವು ಕಂಪನಿಗಳಿಂದ ಯಾವುದೇ ನಿರ್ದಿಷ್ಟ ಸೇವಾ ಸರಬರಾಜು ಖರ್ಚು ವಿವರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಿಲ್ಲ.
ಕರ್ನಾಟಕ ಸರಕಾರ ರೈತರ pumpset ಗೆ ಸರಬರಾಜಾಗುವ ವಿದ್ಯುತ್ ಖರ್ಚಿಗೆ ರೈತರ ಪರವಾಗಿ ವಿದ್ಯುತ್ ಕಂಪನಿಗಳಿಗೆ ಸುಮಾರು ೫೨೦೦ ಕೋಟಿ ರೂಪಾಯಿ (ವರ್ಷವೂ) ಮೊತ್ತದ ಸಬ್ಸಿಡಿ ಹಣ ನೀಡುತ್ತಿದೆ. ಸಬ್ಸಿಡಿ ಹಣದ ಸದುಪಯೋಗವಾಗುತ್ತಿಲ್ಲ. ಸರಬರಾಜು ಕಂಪನಿಗಳು ಸಬ್ಸಿಡಿ ಹಣ ಪಡೆಯಲು ನಿಯಂತ್ರಣ ಆಯೋಗ ಮತ್ತು ಸರಕಾರಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ನವೆಂಬರ್ ೨೦೧೪ ರಂದು ಚಾಲ್ತಿಯಲ್ಲಿರುವ ೧೦ HP ಗಿಂತ ಕಡಿಮೆ ಸಾಮರ್ಥ್ಯದ pumpset ಗಳ ಸಂಖ್ಯೆ ಸುಮಾರು 21,34,409 (೧೦ HP pumpset ಗಳೂ ಸೇರಿಕೊಂಡರೆ ಈ ಸಂಖ್ಯೆ ಇನ್ನೂ ಜಾಸ್ತಿ); ಆದರೆ ಇದೇ ಕಂಪನಿಗಳು ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ (Central Electricity Authority) ಗೆ ಕೊಟ್ಟ ವಿವರದ ಪ್ರಕಾರ ರಾಜ್ಯದಲ್ಲಿರುವ ಒಟ್ಟು pumpset ಗಳ ಸಂಖ್ಯೆ 18,85,489 (Source: Published by Central Electricity Authority http://www.cea.nic.in/…/dpd_div_rep/pumpset_energisation.pdf). ಹೀಗೆ ಸುಮಾರು ಮೂರು ಲಕ್ಷ pumpset ಗಳಿಗೆ ಸರಿ ಸುಮಾರು ಒಂಭೈನೂರು ಕೋಟಿ ರೂಪಾಯಿಯಷ್ಟು ಹಣವನ್ನು ರೈತರ ಹೆಸರಿನಲ್ಲಿ ವಿದ್ಯುತ್ ಕಂಪನಿಗಳು ಪಡೆಯುತ್ತಿವೆ.
ಇವೆಲ್ಲ ವಿವರಗಳನ್ನು ಆಮ್ ಆದ್ಮಿ ಪಾರ್ಟಿಯು ಆಯೋಗದ ಮುಂದೆ ಸಲ್ಲಿಸಿದರೂ ಕೂಡ ಆಯೋಗವು ಎಂದಿನಂತೆ ದರ ಏರಿಕೆ ಪ್ರಸ್ತಾಪವನ್ನು ಮುಂದುವರೆಸುತ್ತಿದೆ. ಒಂಬೈನೂರು ಕೋಟಿ ಮೊತ್ತದ ಅಧಿಕ ಸಬ್ಸಿಡಿ ಸಿಗುತ್ತಿದ್ದರೂ ರೈತರು ಮತ್ತು ಗ್ರಾಮೀಣ ಜನತೆಗೆ ವಿದ್ಯುತ್ ಕಂಪನಿಗಳು ಎರಡನೇ ದರ್ಜೆಯ ಗ್ರಾಹರಕರಂತೆ ನಡೆಸಿಕೊಂಡು ತಮಗೆ ಇಷ್ಟವಿದ್ದಷ್ಟು ಅವಧಿಗೆ ಮಾತ್ರ ವಿದ್ಯುತ್ತನ್ನು ಸರಬರಾಜು ಮಾಡುತ್ತಿವೆ ಎಂದರು.
ಹಾಗೆಯೇ ರೈತರ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಹೆಚ್ಚುವರಿ ಹಣ ಪಡೆದರೂ ರೈತರಿಗೆ ಅಗತ್ಯ ಪ್ರಮಾಣದ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡದ ಕಂಪನಿಗಳ ಕಾರ್ಯ ವೈಖರಿಯ ಬಗ್ಗೆ ಸವಿಸ್ತಾರವಾದ ಸ್ವತಂತ್ರ ತನಿಖೆ ಜರುಗಿಸಬೇಕೆಂದು ರವಿಕೃಷ್ಣ ರೆಡ್ಡಿ ಆಗ್ರಹಿಸಿದರು.
Advertisement